ಸ್ಪರ್ಧೆ ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಉತ್ತಮಪಡಿಸಲು ಇರುವ ಅವಕಾಶ-ಶಾಸಕ ಕೋಟ್ಯಾನ್
Saturday, January 7, 2023
ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಮಹಾವಿದ್ಯಾಲಯ ಹಾಗೂ ಲಲಿತಸಂಘ ಇದರ ವತಿಯಿಂದ ನಡೆದ ಧವಲಾ ಸಿರಿ-2023 ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆಯನ್ನು ಶಾಸಕ ಉಮಾನಾಥ್ ಎ ಕೋಟ್ಯಾನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸುವಂತಹ ಕಾರ್ಯಕ್ರಮ ಧವಲಾ ಸಿರಿ. ಎಂದ ಅವರು ಸ್ಪರ್ಧೆ ಎಂದಾ ತಕ್ಷಣ ತಾವು ಪದಕ ಅಥವಾ ಶಿಲ್ಡ್ನ್ನು ತೆಗೆದುಕೊಂಡು ಹೋಗಲು ಬಂದಿರುವುದೆಂದು ಅಂದುಕೊಂಡರೆ ಅದು ತಪ್ಪು ಕಲ್ಪನೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಾಡಿಸುವ ಉದ್ದೇಶ ತಮ್ಮಲ್ಲಿರುವ ಸಾಮರ್ಥ್ಯವನ್ನು ಇನ್ನೂ ಉತ್ತಮಪಡಿಸಲು ಇರುವಂತಹ ಅವಕಾಶವೇ ಸ್ಪರ್ಧೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳು ಚಲನಚಿತ್ರ ಹಾಗೂ ರಂಗಭೂಮಿಯ ಹಾಸ್ಯಕಲಾವಿದ ಅರವಿಂದ್ ಬೋಳಾರ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೋಳಾರ್, ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಯ ಪ್ರಜ್ಞೆ ಅನ್ನುವುದು ಇರಬೇಕು. ಸಮಯಪ್ರಜ್ಞೆ ಇರುವವನನ್ನು ಸಮಯವೇ ಕಾಪಾಡುತ್ತದೆಂಬುದು ಸತ್ಯ. ಎಂದ ಅವರು ಮಕ್ಕಳು ತಂದೆ-ತಾಯಿ, ಗುರುಗಳು ಯಾರಿಗಾಗಿ ಅವರೆಲ್ಲಾ ಕಷ್ಟಪಡುತ್ತಾರೆಂಬುದನ್ನು ತಲೆಯಲ್ಲಿಟ್ಟುಕೊಂಡು ಪೋಷಕರು, ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡರೆ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಮಹಾವೀರ ಅಜ್ರಿ ಅವರು ಅಧ್ಯಕ್ಷತೆ ವಹಿಸಿದ್ದರು.