ಮಂಗಳೂರಿನಲ್ಲೊಂದು ವಿಚಿತ್ರ ಘಟನೆ- 9 ಲಕ್ಷ ರೂ ಹಣ ಕಳವು ಮಾಡಿ ಪಾಳು ಬಿದ್ದ ಕಟ್ಟಡ ಬಳಿ ಹೂತಿಟ್ಟ- ಮುಂದೇನಾಯ್ತು ಗೊತ್ತಾ?
Sunday, January 15, 2023
ಮಂಗಳೂರು: ಹೂವಿನ ಅಂಗಡಿಯಲ್ಲಿ ಕಳೆದ ನವೆಂಬರ್ ನಲ್ಲಿ ಕಳ್ಳನೋರ್ವ 9 ಲಕ್ಷ ರೂ ಕದ್ದು, ಪಾಳು ಬಿದ್ದ ಕಟ್ಟಡ ಬಳಿ ಹೂತಿಟ್ಟು, ಕೊನೆಗೂ ಆ ಹಣ ಆತನಿಗೆ ಸಿಗದ ವಿಚಿತ್ರ ಘಟನೆ ನಡೆದಿದೆ.
ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ ಕುಂಞಮೋನು ಜಾಫರ್ (48 ) ಗ್ರಹಚಾರಕೆಟ್ಟ ಕಳ್ಳ. ಈತ ಕಳೆದ ನವೆಂಬರ್ 16ರ ತಡರಾತ್ರಿ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂ ಕಳವು ಮಾಡಿದ್ದ. ಇದರ ಜೊತೆ ಸಿಸಿ ಕ್ಯಾಮರಾದ ಡಿವಿಆರ್ ನ್ನು ಕೂಡಾ ಕದ್ದೊಯ್ದಿದ್ದ.
ಈ ಬಗ್ಗೆ ಮಂಗಳೂರು ಉತ್ತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಗರದ ಜ್ಯೋತಿ ಸರ್ಕಲ್ ಬಳಿ ಆರೋಪಿ ಹಮೀದ್ ನನ್ನು ಬಂಧಿಸಿದ್ದಾರೆ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣ ಹೂತಿಟ್ಟ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಹೂವಿನ ಅಂಗಡಿಯಲ್ಲಿ 9 ಲಕ್ಷ ರೂ ಹಣವನ್ನು ಕಳವು ಮಾಡಿದ್ದ ಆರೋಪಿ ಹಮೀದ್, ಆ ಹಣದಲ್ಲಿ ಸ್ವಲ್ಪ ಪಾಲನ್ನು ತನ್ನಲ್ಲಿ ಇಟ್ಟುಕೊಂಡಿದ್ದಾನೆ. ಉಳಿದ ಹಣವನ್ನು ನಗರದ ಪಾಳು ಬಿದ್ದ ಕಟ್ಟಡವೊಂದರ ಬಳಿಯ ನೆಲದಲ್ಲಿ ಹೂತಿಟ್ಟು ಬಂದಿದ್ದ. ಆ ಬಳಿಕ ಪರಾರಿಯಾಗಿದ್ದ ಈತ ಹಣವನ್ನು ಹೂತಿಟ್ಟಿದ್ದ ಜಾಗದಲ್ಲಿ ಮತ್ತೊಮ್ಮೆ ಬಂದು ನೋಡಿದಾಗ ಆ ಪಾಳು ಬಿದ್ದ ಕಟ್ಟಡ ನೆಲಸಮವಾಗಿತ್ತು. ತಾನು ಹಣ ಹೂತಿಟ್ಟಿದ್ದ ಜಾಗದಲ್ಲಿ ಕಟ್ಟಡ ಬಿದ್ದಿತ್ತು. ಈತ ಹಣ ಹೂತಿಟ್ಟಿದ್ದ ಬಳಿಕ ಕಟ್ಟಡ ನೆಲಸಮ ಕಾರ್ಯ ನಡೆದು ಹಣ ಹೂತಿಟ್ಟ ಜಾಗದ ಮೇಲೆ ಕಟ್ಟಡ ನೆಲಸಮವಾದ ಕಾರಣ ಆತನಿಗೆ ತಾನು ಬಚ್ಚಿಟ್ಟ ಹಣ ಸಿಗಲಿಲ್ಲ.
ಆದರೆ ಕಟ್ಟಡ ನೆಲಸಮ ಮಾಡುವಾಗ ಜೆಸಿಬಿಯಿಂದ ನೆಲ ಅಗೆಯುವಾಗ ಜೆಸಿಬಿ ಚಾಲಕನಿಗೆ ಈ ಹಣ ಸಿಕ್ಕಿದೆ. ಈ ಹಣವನ್ನು ಆತ ಸುದ್ದಿ ಮಾಡದೆ ಬಳಸಿದ್ದಾನೆ.
ಪೊಲೀಸರು ವಿಚಾರಿಸಿದಾಗ ಆತನ ಬಳಿ ರೂ 5.80 ಲಕ್ಷ ರೂ ಸಿಕ್ಕಿದೆ.