ಗಲ್ಫ್ ಕನ್ನಡಿಗ ಡಾಟ್ ಕಾಂ ಸ್ಥಾಪಕ ಬಿ.ಜಿ.ಮೋಹನ್ ದಾಸ್ ಅಗಲಿ 2 ವರ್ಷ- ಡಿಜಿಟಲ್ ಮಾಧ್ಯಮದಲ್ಲಿ ವಿಭಿನ್ನ ಛಾಪು ಮೂಡಿಸಿದ ಮಹಾನ್ ವ್ಯಕ್ತಿ ಯ ಸಂಕ್ಷಿಪ್ತ ನೋಟ...
Wednesday, August 31, 2022
ಮಂಗಳೂರು: ಗಲ್ಫ್ ನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಸುದ್ದಿ ಪೂರೈಸಲು ಆರಂಭಿಸಿದ ಗಲ್ಫ್ ಕನ್ನಡಿಗ ಡಾಟ್ ಕಾಮ್ ಅಂತರ್ಜಾಲ ಸುದ್ದಿ ಮಾಧ್ಯಮದ ರೂವಾರಿ ಬಿಜಿ ಮೋಹನ್ ದಾಸ್ ಅವರು ಇಹಲೋಕ ತ್ಯಜಿಸಿ ಆಗಸ್ಟ್ 31ಕ್ಕೆ ಎರಡು ವರ್ಷ ಸಂದಿತು.
1987ರ ಸಮಯದಲ್ಲಿ ದುಬೈ ಕರ್ನಾಟಕ ಸಂಘದ ಸಾರಥ್ಯ ವಹಿಸಿರುವ ಬಿ.ಜಿ.ಮೋಹನ್ ದಾಸ್ ಅವರು ಅನಿವಾಸಿ ಭಾರತೀಯರ ಕಾರ್ಯಕ್ರಮಗಳ ಸುದ್ದಿ ಪ್ರಸಾರ ಮಾಡಲು ಉದಯವಾಣಿ ಪತ್ರಿಕೆಗೆ ಮನವಿ ಮಾಡಿದ್ದರು. ಈ ಪ್ರಯತ್ನದಿಂದ ಗಲ್ಫ್ ಕನ್ನಡಿಗ ವಾರ್ತಾ ಸಂಚಯ ಪ್ರತ್ಯೇಕ ಪುಟವೇ ಮೀಸಲಾಯಿತು. ಗಲ್ಫ್ ವಾಸಿಗಳ ಸುದ್ದಿಗಳಿಗೆ ಮಾತ್ರ ಈ ಸುದ್ದಿ ಪೂರೈಕೆಯಾಗುತ್ತಿತ್ತು. ಅದು ಇಂದಿನ ಪತ್ರಿಕೆ ನಾಳೆ ಸಿಗುವ ಕಾಲವದು, ಆ ಬಳಿಕ ತಂತ್ರಜ್ಞಾನ ಮುಂದುವರಿಯುತ್ತಾ ಇಮೈಲ್, ಮೊಬೈಲ್ ಸಂದೇಶಗಳ ಮೂಲಕ ಇನ್ನಷ್ಟು ಸಂಘಟನೆ ಬಲಗೊಂಡಿತು. ಪತ್ರಿಕೆಯಲ್ಲಿ ಸುದ್ದಿಗಳ ಪೂರೈಕೆಯೂ ವೇಗಗೊಂಡಿತು. ಆ ಬಳಿಕ ಗಲ್ಫ್ ಕನ್ನಡಿಗ ಡಾಟ್. ಕಾಮ್ ಅನ್ನು ತಾವೇ ಸ್ವತಃ ಆರಂಭಿಸಿದರು.
ಬಿ.ಜಿ.ಮೋಹನ್ ದಾಸ್ ಮೂಲತಃ ಪತ್ರಿಕೋದ್ಯಮ ವಿದ್ಯಾರ್ಥಿಯಲ್ಲ. ಅವರು ಬಿ.ಫಾರ್ಮಾ, ಎಂ.ಫಾರ್ಮಾ ವಿದ್ಯಾರ್ಥಿಯಾಗಿದ್ದು, ದುಬೈ ಕರ್ನಾಟಕ ಸಂಘದ ಸಾರಥ್ಯ ವಹಿಸಿದ ಬಳಿಕ ಅನಿವಾರ್ಯವಾಗಿ ಪತ್ರಿಕೋದ್ಯಮದ ನಂಟು ಬೆಳೆದು, ಗಲ್ಫ್ ಕನ್ನಡಿಗ ಡಾಟ್.ಕಾಮ್ ಆರಂಭವಾಯಿತು.
ಬಿ.ಜಿ.ಮೋಹನ್ ದಾಸರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಭದ್ರಾವತಿ, ಆಗುಂಬೆ ಗಳಲ್ಲಿ ಪೂರೈಸಿ
ಬಳಿಕ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ ಪಡೆದರು. ಬಳಿಕ ಉಡುಪಿಯ ಪೂರ್ಣಪ್ರಜ್ಞ ಕಾಲೇಜುನಲ್ಲಿ ಕಾಲೇಜು ಶಿಕ್ಷಣ ಪೂರೈಸಿ ಮಣಿಪಾಲದ ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮಾ ಪೂರೈಸಿ ಮಣಿಪಾಲದ ಬೃಹತ್ ಆಸ್ಪತ್ರೆಯ ಫಾರ್ಮಸಿ ವಿಭಾಗದ ಪ್ರಥಮ ಪದವೀಧರ ಚೀಫ್ ಫಾರ್ಮಾಸಿಸ್ಟ್ ಆಗಿ ನೇಮಕಗೊಂಡರು.
ಆ ಸಮಯದಲ್ಲಿ ತಮ್ಮ ಹುಟ್ಟೂರು ಬೈಂದೂರು, ಬಿಜೂರುನಿಂದ ಮತ್ತು ಈಗಿನ ಬೈಂದೂರು ತಾಲೂಕಿನ ಆಸುಪಾಸಿನಿಂದ ಮಣಿಪಾಲಕ್ಕೆ ಬರುವಂತಹ ಬಡ ರೋಗಿಗಳಿಗೆ ಕೈಲಾದ ಸಹಾಯ ಮಾಡಿದರು. ಅಂದು ಇವರನ್ನು ಹುಡುಕಿಕೊಂಡು ಬರುವ ರೋಗಿಗಳ ಸಂಖ್ಯೆ ಅಧಿಕಾಯಿತು. ಆ ಸಮಯದಲ್ಲಿ ಸ್ನಾತಕೋತ್ತರ ಪದವಿ ಕಲಿಕೆಗೆ ಸೇರ್ಪಡೆ, ಎಂ.ಫಾರ್ಮಾದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ಅಂದು ದೆಹಲಿಯಲ್ಲಿ ನಡೆದ ಕೆ.ಕೆ ಆಚಾರ್ಜಿ ರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಔಷಧ ವಿಭಾಗದ 'ನಾನು ಮತ್ತು ನನ್ನ ಬಡ ರೋಗಿ' ಪ್ರಬಂಧಕ್ಕೆ ಪ್ರಥಮ ಸ್ಥಾನ ಪಡೆದರು. ಮಣಿಪಾಲ ಜೇಸೀಸ್ ನಿಂದ ಸಮಾಜ ಸೇವೆ ಮತ್ತು ಸಂವಿಧಾನದ ಕಲಿಕೆ. ನಿರರ್ಗಳ ಇಂಗ್ಲಿಷ್ ಭಾಷೆಯ ಹಿಡಿತ. ದೂರದ ಅಮೇರಿಕಾಕ್ಕೆ ಹೋಗುವ ಬಯಕೆಯನ್ನು ಹೊಂದಿದ್ದ ಇವರು ತೆರಳಿದ್ದು ಮಾತ್ರ ಸೌದಿ ಅರೇಬಿಯಾ ದ ಅಲ್ ಜುಬೈಲ್ ಗೆ. ಅಲ್ಲಿ ಚೀಫ್ ಫಾರ್ಮಾಸಿಸ್ಟ್ ಆಗಿ ಒಂದೂವರೆ ವರ್ಷ ಉದ್ಯೋಗ ಪೂರೈಸಿ ತಾಯ್ನಾಡಿಗೆ ಮರಳಿದರು.
1983 ರ ಬೈಂದೂರು ವಿಧಾನ ಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದರು. ಬಳಿಕ ಮತ್ತೆ ದುಬೈಗೆ ಪಯಣ. ಫಾರ್ಮಾಸ್ಯೂಟಿಕಲ್ ವ್ಯಾಪಾರ ವಲಯದಲ್ಲಿ ಪಂಥಾಹ್ವಾನದ ಉದ್ಯೋಗ. ಈ ಮಧ್ಯೆ ಕನ್ನಡ ಭಾಷೆಯ ಮೇಲೆ ಒಲವು. ಅದಕ್ಕೋಸ್ಕರ ನಿರಂತರ ಹೋರಾಟ. ಮೊಬೈಲ್ ಇಮೈಲ್ ಗಳಿಲ್ಲದ ಕಾಲ. ದುಬೈಯಲ್ಲಿ ನಿಯಮಿತ ಕನ್ನಡಿಗರೆಲ್ಲರೊಂದಿಗೆ ಸೇರಿ ದುಬೈ ಕರ್ನಾಟಕ ಸಂಘದ ರಚನೆ. ಅನಿವಾಸಿ ಕನ್ನಡಿಗರ ಮನೆಮನೆಗಳಲ್ಲಿ ವಾರ, ತಿಂಗಳೊಂದರಂತೆ ಕನ್ನಡದ ಸಭೆಗಳು. ಎಲ್ಲ ಗಲ್ಫ್ ಕನ್ನಡಿಗರನ್ನು ಒಂದು ಗೂಡಿಸುವ ಹುರುಪು. ಕರ್ನಾಟಕದ ಸಾಧಕರಿಗೆ, ರಾಜಕೀಯ ನಾಯಕರಿಗೆ ದುಬೈಗೆ ಹೋದಾಗ ಮಾತನಾಡಲು ಇದೇ ಸಂಘ ವೇದಿಕೆಯಾಗಿ ಬೆಳೆಯಿತು. ಈ ಮಧ್ಯೆ ಬೀಜಿಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ. ಆದರೂ ಸಮಯ ಮೀಸಲಿಟ್ಟು ಕನ್ನಡಕ್ಕೋಸ್ಕರ ಹೋರಾಟ.
ಈ ನಡುವೆ ಮಂಗಳೂರಿನ ಯಶೋಧ ಅವರೊಂದಿಗೆ ವಿವಾಹವಾದ ಬಿ.ಜಿ.ಮೋಹನ್ ದಾಸ್ ಅವರು ಅಖಿಲ್ ಮತ್ತು ಯಶಸ್ವಿ ಎಂಬ ಎರಡು ಮಕ್ಕಳ ತಂದೆಯಾದರು.
ಈತನ್ಮಧ್ಯೆ ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಸಂಘ ಸಂಸ್ಥೆಗಳ ಸಾರಥ್ಯ. ತಾನು ಸ್ಥಾಪಿಸಿದ ವೆಬ್ ಸೈಟ್ ಗಳ ಅಭಿವೃದ್ಧಿ ಗೆ ಮತ್ತು ನಿಯಂತ್ರಣಕ್ಕೆ ಹಲವು ದೇಶ ಹಾಗೂ ವಿದೇಶಗಳ ಸಹಸ್ರ ಸಹಸ್ರ ಯುವಕ ಯುವತಿಯರಿಗೆ ವೆಬ್ಸೈಟ್ ಮಾದ್ಯಮ, ಮಾಹಿತಿ ತಂತ್ರಜ್ಞಾನ, ನಿಯಮಾವಳಿ ಗಳ ತರಬೇತಿ ನೀಡಿದರು. ಇವರಿಗೆ ಹಲವಾರು ಅಂತರಾಷ್ಟ್ರೀಯ ಗೌರವ, ತಾಯ್ನಾಡಿನ ಪುರಸ್ಕಾರಗಳು ಲಭಿಸಿದೆ. ಮಣಿಪಾಲ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಹಳೆ ವಿದ್ಯಾರ್ಥಿ ಗೌರವ ಪುರಸ್ಕಾರ, 2019 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ದೊರೆಯಿತು. 2020 ರಲ್ಲಿ ಇಹ ಲೋಕ ತ್ಯಜಿಸಿದ ಬೀಜಿ ನೆನಪಿಗೆ ಆಗಸ್ಟ್ 31ಕ್ಕೆ ಒಂದು ವರ್ಷ ಸಂದಿತು. ಬಿ.ಜಿ.ಮೋಹನ್ ದಾಸ್ ಅವರ ನೆನಪಿಗಾಗಿ ಕಳೆದ ವರ್ಷ (2021) ದಿಂದ ತುಂಬೆಯ ನಿರತ ಸಾಹಿತ್ಯ ಸಂಪದ ಹಾಗೂ ಗಲ್ಫ್ ಕನ್ನಡಿಗ ಡಾಟ್ ಕಾಂ ಜಂಟಿ ಆಶ್ರಯದಲ್ಲಿ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿಯನ್ನು ಆರಂಭಿಸಲಾಗಿದೆ. ಇದು ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರವಾಗುವ ಅತ್ಯುತ್ತಮ ವರದಿಗೆ ಕೊಡಮಾಡುವ ಪ್ರಪ್ರಥಮ ಪ್ರಶಸ್ತಿಯಾಗಿದೆ.