UDUPI : ವಿಶಾಲ ಗಾಣಿಗ ಕೊಲೆ ಪ್ರಕರಣ : ಮತ್ತೋರ್ವ ಆರೋಪಿ ಬಂಧನ
Saturday, July 9, 2022
ಉಡುಪಿಯ ಬ್ರಹ್ಮಾವರದಲ್ಲಿ 2021 ಜುಲೈ 12ರಂದು ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದ ಮತ್ತೋರ್ವ ಆರೋಪಿಯನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ. ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಉಡುಪಿ ಪೋಲಿಸರು ಬಂಧಿಸಿದ್ದಾರೆ.
ರೋಹಿತ್, ಮೂಲತಃ ಮುಂಬೈ ಮೂಲದವನಾಗಿದ್ದು ಕೊಲೆ ನಡೆಸಿದ ಬಳಿಕ ನಾಪತ್ತೆಯಾಗಿದ್ದನು. ಈ ಸುಪಾರಿ ಹಂತಕನನ್ನು ಸೆರೆ ಹಿಡಿಯಲು ಪೊಲೀಸ್ ತಂಡ, ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದ್ದರು. ಈತ ವಿಶಾಲ ಗಾಣಿಗ ಕೊಲೆಯ ನಂತರ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ ಗಂಜ್ ಪರಿಸರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ವಿಶಾಲ ಗಾಣಿಗ ಅವರನ್ನು ಬ್ರಹ್ಮಾವರದ ಪ್ಲ್ಯಾಟ್ ನಲ್ಲಿ ಭೀಕರವಾಗಿ ಹತ್ಯೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಮಂಗಳ ಸೂತ್ರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಲಾಗಿತ್ತು. ಈ ಕೊಲೆಯ ಸೂತ್ರದಾರನಾದ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದು ಕೊಂಡೆ ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದ. ವಿಶಾಲ ಗಾಣಿಗಳ ಗಂಡ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಕ್‌ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಪೋಲಿಸರು ಬಂಧಿಸಿ ಸುಲಿಗೆ ಮಾಡಿದ ಚಿನ್ನಾಭರಣವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.