ತಿಂಗಳಿಗೆ 50 ಸಾವಿರಕ್ಕೂ ಅಧಿಕ salary ಪಡೆಯುತ್ತಿದ್ದವನಿಗೆ ಈಗ ದಿನಕ್ಕೆ 63 ರೂ. ಕೂಲಿ
Tuesday, June 21, 2022
ತಿರುವನಂತಪುರಂ: ಹೆಚ್ಚುವರಿ ವರದಕ್ಷಿಣೆ ಗಾಗಿ ತನ್ನ ಹೆಂಡತಿಯನ್ನು ಪೀಡಿಸಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಕೇರಳ ಮೋಟಾರು ವೆಹಿಕಲ್ ಡಿಪಾರ್ಟ್ಮೆಂಟ್ ಉದ್ಯೋಗಿ ಸದ್ಯ ಶಿಕ್ಷೆ ಪ್ರಕಟಗೊಂಡು ಜೈಲು ಸೇರಿದ್ದು, ಜೈಲಿನಲ್ಲಿ ಗಾರ್ಡನಿಂಗ್ ಕೆಲಸ ಮಾಡುತ್ತಿದ್ದಾನೆ. ಈ ಕೆಲಸಕ್ಕಾಗಿ ಆತನಿಗೆ ದಿನಂಪ್ರತಿ 63 ರೂ ಕೂಲಿ ಸಿಗಲಿದೆ.
ಕೊಲ್ಲಂ ಜಿಲ್ಲೆಯ ಮೋಟಾರು ವೆಹಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಉದ್ಯೋಗಿಯಾಗಿದ್ದ ಕಿರಣ್ ಗೆ ಕೈತುಂಬಾ ಸಂಬಳ ಇತ್ತು. ಈತನ ಮದುವೆ 2020ರಲ್ಲಿ ವಿಸ್ಮಯಾ ಎಂಬ ವೈದ್ಯೆ ಜೊತೆ ನಡೆದಿತ್ತು. ಬಳಿಕ ದೊರೆತ ವರದಕ್ಷಿಣೆ ಕಡಿಮೆಯಾಗಿದೆ, ನೀಡಿದ ಕಾರು ಕಡಿಮೆ ಮೊತ್ತದ್ದು ಎಂದು ಕಿರಣ್ ತಗಾದೆ ತೆಗೆದು ವಿಸ್ಮಯಳಿಗೆ ಕಿರುಕುಳ ನೀಡುತ್ತಿದ್ದ.
ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಪ್ರಕರಣ ವಿಚಾರಣೆ ನಡೆಸಿದ್ದ ಕೊಲ್ಲಂನ ಜಿಲ್ಲಾ ನ್ಯಾಯಾಲಯ ಕಿರಣ್ಗೆ ಮೂರು ಸೆಕ್ಷನ್ (ಐಪಿಸಿ 304-ಹತ್ತು ವರ್ಷ, 306-ಆರು ವರ್ಷ, 498-ಎರಡು ವರ್ಷ) ಅಡಿಯಲ್ಲಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಪ್ರಕರಣಗಳಲ್ಲಿ ಕಿರಣ್ ಒಟ್ಟಿಗೆ ಶಿಕ್ಷೆಯನ್ನು ಅನುಭವಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಗರಿಷ್ಠ 10 ವರ್ಷದ ಜೈಲು ಶಿಕ್ಷೆಗೆ ಒಳಗಾಗಿದ್ದ. ಇದಲ್ಲದೆ 12.5 ಲಕ್ಷ ದಂಡ ಪಾವತಿಸಬೇಕಿದೆ.
ಸದ್ಯ ಕಿರಣ್ ಪುಜಾಪ್ಪುರದ ಕೇಂದ್ರ ಕಾರಾಗೃಹದ ಐದನೇ ಬ್ಲಾಕ್ನ ಕೈದಿಯಾಗಿದ್ದಾನೆ. ಇಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಜೈಲಿನ ತೋಟದಲ್ಲಿ ಕೆಲಸ ಮಾಡುತ್ತಾನೆ. ಇದಕ್ಕಾಗಿ 63 ರೂಪಾಯಿ ದಿನಗೂಲಿಯನ್ನು ಪಡೆಯುತ್ತಿದ್ದಾರೆ.