ಹಣದ ದಾಹಕ್ಕೆ ಯುವತಿ ಬಲಿ: ವೇಲ್ ನಿಂದ ಕತ್ತು ಬಿಗಿದು ಪತ್ನಿಯ ಹತ್ಯೆಗೈದ ಪತಿ
Monday, March 28, 2022
ಬೆಂಗಳೂರು: ತವರು ಮನೆಯಿಂದ ಹಣ ತರಲು ನಿರಾಕರಿಸಿರುವ ಪತ್ನಿಯನ್ನು ವೇಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಆರೋಪದ ಮೇಲೆ ಪತಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಮುನೇಶ್ವರ ನಗರ ವಾಸಿ, ಚಾಲಕ ಪತಿ ಯೋಗೇಶ್(28) ಬಂಧಿತ ಆರೋಪಿ.
ವೃತ್ತಿಯಲ್ಲಿ ಚಾಲಕನಾಗಿದ್ದ ಯೋಗೀಶ್ ಮೂರು ವರ್ಷಗಳ ಹಿಂದೆ ಸೌಮ್ಯಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಪತ್ನಿ ಸೌಮ್ಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿಯ ನಡುವೆ ಕಾಲಕ್ರಮೇಣ ವಿರಸ ಉಂಟಾಗಿತ್ತು. ಯೋಗೀಶ್ ಹಣ ಹಾಗೂ ಒಡವೆ ತರುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ. ಪುತ್ರಿ ಚೆನ್ನಾಗಿರಲೆಂದು ಸೌಮ್ಯಾ ಮನೆಯವರು ಎರಡು ಬಾರಿ ಹಣವನ್ನು ಕೊಟ್ಟಿದ್ದರು.
ಆದರೂ ಆರೋಪಿ ಯೋಗೀಶ್ ಹಣದ ದಾಹ ಕಡಿಮೆ ಆಗಿರಲಿಲ್ಲ. ಆದ್ದರಿಂದ ಆಕೆಗೆ ಪದೇ ಪದೆ ಹಣ ತರುವಂತೆ ಪೀಡಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ದಿನದಿಂದ ತವರು ಮನೆಯಿಂದ ಅರ್ಜೆಂಟ್ ಆಗಿ 2 ಲಕ್ಷ ಹಣ ರೂ. ತರುವಂತೆ ಪತ್ನಿ ಸೌಮ್ಯಾ ಜತೆ ಮನೆಯಲ್ಲಿ ಜಗಳವಾಡಿದ್ದಾನೆ. ಇದು ತಾರಕ್ಕೇರಿ ಯೋಗೀಶ್ ವೇಲ್‌ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಸುದ್ದಿ ತಿಳಿದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.