ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾವಳಿ: ಆಳ್ವಾಸ್ ಗೆ ಚಾಂಪಿಯನ್ ಪಟ್ಟ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ವಿವಿ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಅಂರ‍್ಕಾಲೇಜು ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ತಂಡ ವಿರಾಜಪೇಟೆಯ ಸೈಂಟ್ ಆನ್ಸ್ ಕಾಲೇಜು ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು. ಉತ್ತಮ ಪೈಪೋಟಿ ನೀಡಿದ ಸೈಂಟ್ ಆನ್ಸ್ ಕಾಲೇಜು ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿತು. ವಿಶ್ವವಿದ್ಯಾನಿಲಯ ಕಾಲೇಜು ತಂಡ ಮೂರನೇ ಸ್ಥಾನ ಪಡೆದರೆ, ಸೈಂಟ್ ಅಲೋಶಿಯಸ್ ಕಾಲೇಜು ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಸೈಂಟ್ ಆನ್ಸ್ ಕಾಲೇಜಿನ ದಿವಿನಾ ಸಾಲ್ದಾನ ಅತ್ಯುತ್ತಮ ಆಟಗರ‍್ತಿ ಪ್ರಶಸ್ತಿ ಪಡೆದರೆ, ವಿವಿ ಕಾಲೇಜಿನ ಶ್ರೀಮತಿ ಅತ್ಯುತ್ತಮ ಗೋಲ್ ಕೀಪರ್ ಗೌರವಕ್ಕೆ ಪಾತ್ರರಾದರು.
ಮಗುವಿನಂತೆ ಆಡಿ
ಬಹುಮಾನ ವಿತರಣಾ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಒಂದು ಸಾಧನೆ. ನಿರಾಶರಾಗದೆ ಮಗುವಿನಂತೆ ಸಹಜವಾಗಿ ಆಡಿ, ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೂಲ್ಕಿಯ ವಿಜಯಾ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನರ‍್ದೇಶಕ ಸಿದ್ಧರಾಮಣ್ಣ ಮಾತನಾಡಿ ಕ್ರೀಡೆಯಲ್ಲಿ ಸಾಧನೆಗೆ ಅಮಿತ ಅವಕಾಶವಿದೆ. ದೈಹಿಕ ಸದೃಢತೆ, ವೃತ್ತಿಪರತೆ ಮೈಗೂಡಿಸಿಕೊಳ್ಳಲೂ ಕ್ರೀಡೆ ಬೇಕು, ಎಂದರು. ಅಧ್ಯಕ್ಷತೆ ವಹಿಸಿದ್ದ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಪಂದ್ಯಾವಳಿ ಆಯೋಜಿಸಿದವರಿಗೆ ಮತ್ತು ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ಉಪ ನಿರ್ದೇಶಕ ಡಾ. ಕೇಶವಮೂರ್ತಿ ಟಿ, ಕಾಲೇಜು ಮೊದಲ ಬಾರಿಗೆ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದೆ, ಎಂದು ಹೆಮ್ಮೆ ವ್ಯಕ್ತಪಡಿಸಿದರು. ರಸಾಯನ ಶಾಸ್ತ್ರ ವಿಭಾಗದ ರೇಖಾ ಶಂಕರ್ ಕಾರ‍್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ಡಾ. ಕುಮಾರಸ್ವಾಮಿ ಎಂ ಬಹುಮಾನ ವಿತರಣಾ ಕಾರ‍್ಯಕ್ರಮ ನಡೆಸಿಕೊಟ್ಟರು. ದೈಹಿಕ ಶಿಕ್ಷಕರಾದ ಅಲ್ತಾಫ್ ಸಾಬ್, ಅಶ್ವಥ್, ಸಲಹಾ ಸಮಿತಿಯ ಸದಸ್ಯರುಗಳು, ವಿದ್ಯಾರ್ಥಿ ಸ್ವಯಂಸೇವಕರು ಹಾಜರಿದ್ದರು.