ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? - ಮಂಗಳೂರಿನಲ್ಲಿ ನಡೆಯಿತು ಕಾರ್ಯಾಗಾರ
Tuesday, September 21, 2021
ಮಂಗಳೂರು : ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಶ್ಚಿತ ಗುರಿಯಿಟ್ಟುಕೊಂಡು, ಯೋಜಿತವಾಗಿ ಅಧ್ಯಯನ ಮಾಡಿದ್ದಲ್ಲಿ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಅಭಿಪ್ರಾಯಪಟ್ಟರು.
ಅವರು ಸೆ.21ರ ಮಂಗಳವಾರ ನಗರದ ಡಾ. ಪಿ. ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗಕೋಶ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ನಡೆದ “ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ” ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಅಗತ್ಯ. ಅದನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಕಷ್ಟು ಪೂರ್ವ ತಯಾರಿ ಬೇಕೆ. ಬೇಕು, ನಿರಂತರ ಅಧ್ಯಯನ ಹಾಗೂ ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿದಲ್ಲಿ ಖಂಡಿತವಾಗಿಯೂ ಯಶಸ್ಸು ಸಾಧ್ಯ ಎಂದವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರತಿದಿನ ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು, ಅದಕ್ಕಾಗಿ ದಿನಪತ್ರಿಕೆಗಳು, ಮ್ಯಾಗಜೀನ್‍ಗಳನ್ನು ಓದಬೇಕು, ಕಾಲೇಜು ಅಭ್ಯಾಸದ ದಿನಗಳಲ್ಲಿ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಂಡು ಬದುಕನ್ನು ಸಾಧನೆಯ ಹಾದಿಯಾಗಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಈ ಕಾರ್ಯಕ್ರಮಗಳ ಸದುಪಯೋಗ ಪಡೆಯುವಂತೆ ಕೋರಿದರು.
ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ. ಜಯಕರ ಭಂಢಾರಿ ಎಂ, ಉದ್ಯೋಗ ಕೋಶದ ಸಂಚಾಲಕ ಪ್ರೊ. ಅಶ್ವಿತ ಕರ್ಕೇರ.ಎನ್, ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಕಾಶ್‍ಚಂದ್ರ, ಐಕ್ಯೂಎಸಿ ಸಂಯೋಜಕ ಡಾ. ತೆರೇಸ್ ಪಿರೇರಾ, ಉದ್ಯೋಗ ಕೋಶದ ಸಂಯೋಜಕ ಪ್ರೊ. ರಘುಪತಿ ಹಾಗೂ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.