ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2021 ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
Tuesday, September 21, 2021
ಮಕ್ಕಳ ಜಗಲಿ - ಸಣ್ಣ ಮಕ್ಕಳಿಂದ ಪಿಯುಸಿವರೆಗಿನ ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ. ಕೋವಿಡ್ ಕಾರಣದಿಂದ ಶಾಲೆಗಳು ತೆರೆಯದೆ ಮಕ್ಕಳು ಮನೆಯಲ್ಲಿ ಉಳಿದಂತಹ ಸಂದರ್ಭದಲ್ಲಿ , ಮಕ್ಕಳ ಕಲಿಕಾ ಚಟುವಟಿಕೆಗೊಂದು ವೇದಿಕೆ ಅನಿವಾರ್ಯವಾಗಿತ್ತು. ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ಬೆಂಬಲ ಕೊಡುವ ನಿಟ್ಟಿನಲ್ಲಿ ಹಾಗೂ ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಮಕ್ಕಳ ಜಗಲಿ ಆರಂಭವಾಯಿತು. ಮುಂಬರುವ ನವಂಬರ್ 14 - ಮಕ್ಕಳ ಜಗಲಿ ಗೆ ಒಂದು ವರ್ಷದ ಸಂಭ್ರಮ.... ಈ ಸವಿನೆನಪಿಗೆ ಮಕ್ಕಳ ಜಗಲಿ ಬಳಗವು ಮಕ್ಕಳಿಗಾಗಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಿದೆ.
ಅಂಚೆ ಮೂಲಕ ನಡೆಸಲ್ಪಡುವ ಈ ಚಿತ್ರಕಲಾ ಸ್ಪರ್ಧೆಯ ಭಿತ್ತಿಪತ್ರವನ್ನು ಮಂಗಳೂರು ಜಿಲ್ಲಾ ಪಂಚಾಯತ್ ಕಟ್ಟಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಯಲಿರುವುದು. 1 ರಿಂದ 3 ನೇ ತರಗತಿ ಮತ್ತು 4 ರಿಂದ 6 ನೇ ತರಗತಿಯ ವಿಭಾಗದವರಿಗೆ ಐಚ್ಛಿಕ ವಿಷಯ , 7 ರಿಂದ 9 ನೇ ತರಗತಿ ವಿಭಾಗದವರಿಗೆ ನನ್ನ ನೆಚ್ಚಿನ ಹಬ್ಬ ಮತ್ತು 10 ,11 ,12 ತರಗತಿಯವರಿಗೆ ನನ್ನ ಊರಿನ ಜಾನಪದ ವೈಶಿಷ್ಟ್ಯ ಕುರಿತು A4 ಅಳತೆಯ ಡ್ರಾಯಿಂಗ್ ಹಾಳೆಯಲ್ಲಿ ಚಿತ್ರ ಬಿಡಿಸಲು ಅವಕಾಶ ನೀಡಿದೆ. ಚಿತ್ರ ರಚಿಸಿದ ವಿದ್ಯಾರ್ಥಿಗಳು ಶಾಲಾ ಮುಖ್ಯ ಶಿಕ್ಷಕರಿಂದ ಅಥವಾ ಶಾಲೆ ತೆರೆಯದೆ ಇದ್ದ ಸಂದರ್ಭದಲ್ಲಿ ಮಕ್ಕಳ ಪೋಷಕರಿಂದ ಚಿತ್ರಕಲಾ ಕೃತಿಯನ್ನು ದೃಢೀಕರಿಸಿ ಕಳುಹಿಸಿ ಕೊಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ www.makkalajagali.com ವೆಬ್ ಸೈಟಲ್ಲಿ ಮಾಹಿತಿ ಪಡೆಯಬಹುದು.
ಭಿತ್ತಿ ಪತ್ರಿಕೆಯ ಬಿಡುಗಡೆಯ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಎಂ. ಪಿ. , ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಸಿ. ಹಾಗೂ ಬೆಳ್ತಂಗಡಿ , ಸುಳ್ಯ , ಮಂಗಳೂರು , ಮೂಡಬಿದ್ರೆ ತಾಲೂಕಿನ ಎಲ್ಲಾ ಶಿಕ್ಷಣಾಧಿಕಾರಿಯವರು ಭಾಗವಹಿಸಿದ್ದರು. ಶ್ರೀ ಉಮಾನಾಥ್ ರೈ , ಶ್ರೀ ಶಿವಪ್ರಸಾದ್ ಶೆಟ್ಟಿ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು. ಮಕ್ಕಳ ಜಗಲಿ ಬಳಗದ ಮಂಗಳೂರು ದಕ್ಷಿಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಸಾದ್ ನಲ್ಲೂರು ಮತ್ತು ಚಿತ್ರಕಲಾ ಶಿಕ್ಷಕ ಶ್ರೀ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲಾ ಪ್ರಾಸ್ತಾವಿಕ ಮಾತುಗಳನ್ನಾಡಿ ಗಣ್ಯರನ್ನು ಸ್ವಾಗತಿಸಿದರು. ಕಲಾವಿದ ತಾರಾನಾಥ ಕೈರಂಗಳ ವಂದಿಸಿದರು.