ಸರಿಯಾದ ಡಿಗ್ರಿಯೇ ಇಲ್ಲದೆ ವಕೀಲಳ ಸೋಗು ಹಾಕಿ ಸಿಕ್ಕಿ ಬಿದ್ದ ಮಹಿಳೆ..!!
Monday, July 26, 2021
ಅಲಪುಜಾ : ಸುಮಾರು 4 ವರ್ಷಗಳಿಂದ ಡಿಗ್ರಿಯೇ ಇಲ್ಲದೆ ವಕಾಲತ್ತು ನಡೆಸುತ್ತಿದ್ದ ಮಹಿಳೆಯೊಬ್ಬಳ ಮೇಲೆ ಕೇರಳ ಪೊಲೀಸರು ವಂಚನೆ, ಫೋರ್ಜರಿ ಮತ್ತಿತರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಸೆಸ್ಸಿ ಗ್ಸೇವಿಯರ್ ಎಂಬ ಈ ಮಹಿಳೆ ಇದೀಗ ಪೊಲೀಸರಿಂದ ತಲೆಮರೆಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಆರೋಪಿ ಸೆಸ್ಸಿ, ತನ್ನ ಎಲ್ಎಲ್ಬಿ ಕೋರ್ಸ್ ಮುಗಿಯಿತೆಂದು ಹೇಳಿ ಮಾರ್ಚ್ 2019 ರಲ್ಲಿ ಕೇರಳ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿದ್ದಾಗಿ ರೋಲ್ ನಂಬರ್ ಒದಗಿಸಿದ್ದಳು. ಆಗಿನಿಂದ ವಕೀಲಳಾಗಿಯೇ ಕಾರ್ಯನಿರ್ವಹಿಸುತ್ತಿರುವ ಆಕೆ ಹಲವು ಮೊಕದ್ದಮೆಗಳಲ್ಲಿ ವಕಾಲತ್ನಾಮೆ ಸಲ್ಲಿಸಿದ್ದಾಳೆ.
ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಅಲಪುಜಾ ವಕೀಲರ ಸಂಘದ ಚುನಾವಣೆಯಲ್ಲೂ ಭಾಗವಹಿಸಿದ ಆಕೆ, ಸಂಘದ ಲೈಬ್ರರಿಯನ್ ಆಗಿ ಆಯ್ಕೆ ಆಗಿದ್ದಳು ಎನ್ನಲಾಗಿದೆ.
ಸೆಸ್ಸಿ ವಕೀಲಳಾಗುವ ಶೈಕ್ಷಣಿಕ ಅರ್ಹತೆಯನ್ನೇ ಹೊಂದಿಲ್ಲ, ಆಕೆ ನಕಲಿ ನೋಂದಣಿ ಸಂಖ್ಯೆ ನೀಡಿದ್ದಾಳೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಸೆಸ್ಸಿ, ತನ್ನ ಮೇಲೆ ಪೊಲೀಸರು ಜಾಮೀನುರಹಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದ ನಂತರ ಕೋರ್ಟಿನಿಂದಲೇ ಪಲಾಯನ ಮಾಡಿದಳು. ಪೊಲೀಸರು ಜುಲೈ 18 ರಿಂದ ಆಕೆಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.