ವೀಡಿಯೋಗಾಗಿ ಕಿತ್ತಾಟ ಹೋಯಿತು ಪ್ರಾಣ! ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿತ್ತು?
Sunday, June 13, 2021
ತಿರುವನಂತಪುರಂ: ಒಂದೇ ಒಂದು ವೀಡಿಯೋಗಾಗಿ ಕಿತ್ತಾಟ ನಡೆಸಿ ನಂತರ ಪತಿ ಹಚ್ಚಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಮೃತಳನ್ನು 28 ವರ್ಷದ ಅಥಿರಾ ಎಂದು ಗುರುತಿಸಲಾಗಿದೆ. ಈಕೆ ಶಾನವಾಸ್ ಎಂಬಾತನ ಜತೆ ಲಿವ್ ಇನ್ ರಿಲೇಶನ್ನಲ್ಲಿದ್ದಳು. ಅಥಿರಾ ವಿಡಿಯೋವೊಂದರ ಕುರಿತು ಇಬ್ಬರ ನಡುವೆ ಜಗಳ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಶಾನವಾಸ್, ಅಥಿರಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಅಥಿರಾ ಮತ್ತು ಶಾನವಾಸ್ಗೆ 6 ತಿಂಗಳ ಮಗುವಿದೆ. ಘಟನೆ ನಡೆದಾಗ ಮಗು ಮನೆಯಲ್ಲಿಯೇ ಇತ್ತು. ಚಿಕಿತ್ಸೆ ನಡೆಯುವಾಗಲೇ ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆಯುವಾಗ ಶಾನವಾಸ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎಂದು ಹೇಳಿದ್ದಾಳೆ. ಅದೇ ಆಸ್ಪತ್ರೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಥಿರಾ ಹೇಳಿಕೆ ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.