ಮಂಗಳೂರು;PUC ವಿದ್ಯಾರ್ಥಿನಿಯಿಂದ ಪ್ರೀತಿ ನಿರಾಕರಣೆ- ಚೂರಿ ಪ್ರದರ್ಶಿಸಿ ದಾಂಧಲೆ ಮಾಡಿ ಮಾನಭಂಗಕ್ಕೆ ಯತ್ನಿಸಿದ ಪಾಗಲ್ ಪ್ರೇಮಿ! (video)
Monday, February 1, 2021
ಮಂಗಳೂರು: ಪ್ರೀತಿ ನಿರಾಕರಣೆ ಮಾಡಿರುವ ಸಿಟ್ಟಿನಲ್ಲಿ ಪಾಗಲ್ ಪ್ರೇಮಿಯೋರ್ವ ಹೊಟೇಲ್ ನಲ್ಲಿ ಬರ್ತ ಡೇ ಪಾರ್ಟಿ ಆಚರಣೆ ಮಾಡುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಾಗೂ ಸ್ನೇಹಿತರ ಮುಂದೆ ಚೂರಿ ಪ್ರದರ್ಶಿಸಿ ದಾಂಧಲೆ ನಡೆಸಿದ್ದಾನೆ. ಈ ದಾಂಧಲೆಯಲ್ಲಿ ಓರ್ವನಿಗೆ ಗಾಯವಾಗಿದ್ದು, ಪೊಲೀಸರು ಪಾಗಲ್ ಪ್ರೇಮಿ ಸಹಿತ ಮೂವರನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಬೋಳೂರು ಬೊಕ್ಕಪಟ್ಣ ನಿವಾಸಿ ತ್ರಿಶೂಲ್ ಸಾಲ್ಯಾನ್, ಕೋಡಿಕಲ್ ಕಲ್ಲಕಂಡ ನಿವಾಸಿ ಸಂತೋಷ್ ಪೂಜಾರಿ ಹಾಗೂ ಅಶೋಕನಗರ ಫಲ್ಗುಣಿ ನಗರ ನಿವಾಸಿ ಡ್ಯಾನಿಶ್ ಬಂಧಿತ ಆರೋಪಿಗಳು.
ಪಾಗಲ್ ಪ್ರೇಮಿ ತ್ರಿಶೂಲ್ ಸಾಲ್ಯಾನ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಳೆದ ಒಂದುವರೆ ವರ್ಷಗಳಿಂದ ಸ್ನೇಹದಿಂದಿದ್ದರು. ಇತ್ತೀಚಿಗೆ ತ್ರಿಶೂಲ್ ತನ್ನೊಂದಿಗೆ ಸ್ನೇಹ ಮುಂದುವರಿಸಬೇಕು, ಪ್ರೀತಿಸಬೇಕು ಎಂದು ವಿದ್ಯಾರ್ಥಿನಿಯನ್ನು ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿನಿ 'ನಿನ್ನೊಂದಿಗಿನ ಸಂಬಂಧವನ್ನು ಮುರಿಯುತ್ತೇನೆ. ನೀನು ಕೊಟ್ಟಿರುವ ಗಿಫ್ಟ್ ಹಾಗೂ ಉಂಗುರವನ್ನು ಹಿಂದಿರುಗಿಸುತ್ತೇನೆ' ಎಂದು ನಗರದ ಬಂಟ್ಸ್ ಹಾಸ್ಟೆಲ್ ಬಳಿಗೆ ಜ.30ರಂದು ಕರೆಸಿಕೊಂಡಿದ್ದಾಳೆ.
ಅಂದು 10.30-11 ಸುಮಾರಿಗೆ ಭೇಟಿಯಾದ ತ್ರಿಶೂಲ್ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ 'ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ' ಎಂದು ಚಾಕು ತೋರಿಸಿದ್ದಾನೆ. ವಿದ್ಯಾರ್ಥಿನಿ ಇದನ್ನು ಕ್ಯಾರೇ ಎನ್ನದೆ, ತನ್ನ ಸ್ನೇಹಿತ-ಸ್ನೇಹಿತೆಯರೊಂದಿಗೆ ಮತ್ತೋರ್ವ ಸ್ನೇಹಿತೆಯ ಬರ್ತ್ ಡೇ ಪಾರ್ಟಿ ಆಚರಿಸಲು ನಗರದ ಕುಮಾರ್ ಇಂಟರ್ ನ್ಯಾಷನಲ್ ಹೊಟೇಲ್ ಗೆ ತೆರಳಿದ್ದಾಳೆ.
ಆಕೆಯ ಪ್ರೀತಿ ನಿರಾಕರಣೆಯಿಂದ ಸಿಟ್ಟುಗೊಂಡ ತ್ರಿಶೂಲ್ ತನ್ನ ಸ್ನೇಹಿತರನ್ನು ಕರೆಸಿದ್ದಾನೆ. ಅವರೊಂದಿಗೆ ವಿದ್ಯಾರ್ಥಿನಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದ ಹೊಟೇಲ್ ಗೆ ಏಕಾಏಕಿ ದಾಳಿ ನಡೆಸಿ ವಿದ್ಯಾರ್ಥಿನಿ ಸಹಿತ ಅಲ್ಲಿದ್ದ ಆಕೆಯ ಸ್ನೇಹಿತರ ಮೇಲೆ ಹೆಲ್ಮೆಟ್, ಕೈ ಹಾಗೂ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ದಾಂಧಲೆಯಲ್ಲಿ ವಿದ್ಯಾರ್ಥಿನಿ ಸ್ನೇಹಿತ ಪ್ರತೀಕ್ಷ್ ಎಂಬಾತನ ದೇಹದ ಮೇಲೆ ಗಾಯಗಳಾಗಿವೆ. ಈ ದಾಂಧಲೆ ದೃಶ್ಯದ ವೀಡಿಯೋ ವೈರಲ್ ಆಗುತ್ತಿದ್ದು, ವಿದ್ಯಾರ್ಥಿನಿ ಸ್ನೇಹಿತರ ಮೇಲೆ ಚಾಕು ದಾಳಿ ನಡೆಸಿರೋದು ಅದರಲ್ಲಿ ಸೆರೆ ಯಾಗಿದೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.