ತೆರೆದ ಬಾವಿಗೆ ಬಿದ್ದು ಬಾಲಕ ಸಾವು: ಆಟ ಆಗುವಾಗ ನಡೆದ ಘಟನೆ
ಬೆಂಗಳೂರು: ಕ್ರಿಕೆಟ್ ಆಟ ಆಡುವಾಗ ಬಾಲಕನೊಬ್ಬ ತೆರೆದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಬಾಲಕನನ್ನು 6 ವರ್ಷದ ಅಶ್ವಿನ್ ಎಂದು ಗುರುತಿಸಲಾಗಿದೆ.
ಹೆಣ್ಣೂರು ಬಸ್ ಡಿಪೋ ಹಿಂಭಾಗದಲ್ಲಿ ಇರುವ ಮೈದಾನದಲ್ಲಿ ಆಟ ಆಡುತ್ತಿದ್ದಾಗ ಬಾಲಕ ಅಶ್ವಿನ್ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಆಟ ಆಡುವ ವೇಳೆ ಆಕಸ್ಮಿಕವಾಗಿ ಅಶ್ವಿನ್ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಅಶ್ವಿನ್, ಸಾಯಿನಾ ಮತ್ತು ಮಣಿ ದಂಪತಿಯ ಪುತ್ರನಾಗಿದ್ದು, ತಂದೆ ಮಣಿ ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇನ್ನೂ ತಾಯಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ಅಲ್ಲಿನ ಏಳೆಂಟು ಮನೆಗಳಿಗೆ ಇದೇ ಬಾವಿ ನೀರಿಗೆ ಆಶ್ರಯವಾಗಿತ್ತು. ಆದರೆ ಇದೀಗ ಬಾವಿಗೆ ಬಿದ್ದ ಬಾಲಕ ಮೃತಪಟ್ಟಿರುವುದರಿಂದ ತೆರೆದ ಬಾವಿಗೆ ಯಾವುದೇ ರಕ್ಷಣೆ ಕಲ್ಪಿಸಲ ಸ್ಥಳೀಯ ಮಾಲೀಕರ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬಾಣಸವಾಡಿ ಪೊಲೀಸರು ಬಾವಿಯಿಂದ ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಸ್ಥಳದಲ್ಲಿ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.