Featured

ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ, ವೀಡಿಯೋ ಶೂಟಿಂಗ್: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆ ದೂರು



ಧರ್ಮಸ್ಥಳ/ಬೆಳ್ತಂಗಡಿ: ಯಾವುದೇ ಪೂರ್ವಾನುಮತಿ ಇಲ್ಲದೆ ಬಂಗ್ಲಗುಡ್ಡೆ ರಕ್ಷಿತಾರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರೇ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಹಾಗೂ ಅವರ ಮೇಲೆ ಹಲ್ಲೆಯಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಘಟನೆಯ ಕುರಿತು ಅಧಿಕೃತ ಸ್ಪಷ್ಟನೆ ನೀಡಿದೆ.

ಅರಣ್ಯ ಇಲಾಖೆಯಿಂದ ಕ್ರಮ:

ಸಕ್ಷಮ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯಿಂದ ಸೂಕ್ತ ಅನುಮತಿ ಪಡೆಯದೇ ರಕ್ಷಿತಾರಣ್ಯಕ್ಕೆ ಪ್ರವೇಶಿಸುವುದು ಕಾಯ್ದೆಯಡಿ ಅಪರಾಧವಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ವೀಡಿಯೋ ಶೂಟಿಂಗ್ ನಡೆಸಿದ ಕಾರಣಕ್ಕೆ ಇಬ್ಬರೂ ಯುವಕರ ವಿರುದ್ಧ ಅರಣ್ಯ ಇಲಾಖೆಯು ದೂರರ್ಜಿ ದಾಖಲಿಸಿಕೊಂಡಿದೆ.

ಹಲ್ಲೆ ಆರೋಪ ನಿರಾಕರಿಸಿದ ಪೊಲೀಸರು:

ಯುವಕರನ್ನು ಧರ್ಮಸ್ಥಳ ಠಾಣೆಗೆ ಕರೆತಂದ ಸಂದರ್ಭದಲ್ಲಿ, ಅವರ ಮೇಲೆ ಸ್ಥಳೀಯರಿಂದ ಅಥವಾ ಇತರರಿಂದ ಯಾವುದೇ ಹಲ್ಲೆ ನಡೆದಿದ್ದರೆ ಅಧಿಕೃತ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದರು. ಆದರೆ, "ಈ ಬಗ್ಗೆ ಪರಸ್ಪರ ಚರ್ಚಿಸಿ ಅಗತ್ಯ ಬಿದ್ದರೆ ದೂರು ನೀಡುತ್ತೇವೆ" ಎಂದು ಯುವಕರು ತಿಳಿಸಿದ್ದಾರೆ. ಹೀಗಾಗಿ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಹಲ್ಲೆ ಅಥವಾ ಕ್ರಿಮಿನಲ್ ಪ್ರಕರಣ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಟ್ಯಾಗ್‌ಗಳು: Featured