-->
ಟೀಕೆಯ ಬೆನ್ನಲ್ಲೇ ಯಶ್ ಜೊತೆಗೆ ನಾಯಕಿಯ ಮುಖ ರಿವಿಲ್ ಮಾಡಿದ 'ಟಾಕ್ಸಿಕ್' ಸಿನಿಮಾ ತಂಡ

ಟೀಕೆಯ ಬೆನ್ನಲ್ಲೇ ಯಶ್ ಜೊತೆಗೆ ನಾಯಕಿಯ ಮುಖ ರಿವಿಲ್ ಮಾಡಿದ 'ಟಾಕ್ಸಿಕ್' ಸಿನಿಮಾ ತಂಡ



'ಟಾಕ್ಸಿಕ್’ ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ.  ಮೊದಲ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದ್ದು, ಇಂದು ಮಧ್ಯಾಹ್ನ 12 ಗಂಟೆ 59 ನಿಮಿಷಕ್ಕೆ ‘ತಬಾಹಿ’ ಹಾಡು ರಿಲೀಸ್ ಆಗಲಿದೆ. ಈ ವಿಚಾರ ತಿಳಿಸಲು ಸಿನಿಮಾ ತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕೇವಲ ಯಶ್ ಮುಖ ಮಾತ್ರ ಕಾಣಿಸಿತ್ತು. ಅದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಟೀಕೆ ಎದುರಾಗುತ್ತಿದ್ದಂತೆಯೇ ಇದೀಗ ನಾಯಕಿಯ ಮುಖ ತೋರಿಸಲಾಗಿದೆ.

ಯಶ್ ಮಾತ್ರವಲ್ಲದೇ ಹಲವಾರು ಕಲಾವಿದರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮೊದಲಾವರು ಅಭಿನಯಿಸಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಟೀಸರ್​​ನಲ್ಲಿ ಯಾವ ನಟಿಯ ಮುಖವನ್ನೂ ತೋರಿಸಿಲ್ಲ. ಹಾಡಿನ ಪೋಸ್ಟರ್​ನಲ್ಲೂ ನಾಯಕಿಯ ಮುಖ ಮರೆಮಾಚಲಾಗಿತ್ತು.

ಪ್ರಚಾರದಲ್ಲಿ ಕೇವಲ ಯಶ್ ಅವರನ್ನು ಹೈಲೈಟ್ ಮಾಡಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಯಶ್ ಅವರೊಂದಿಗೆ ಕಿಯಾರಾ ಅಡ್ವಾಣಿ ಅವರ ಮುಖವನ್ನು ತೋರಿಸಲಾಗಿದೆ. ಈ ಸಿನಿಮಾದಲ್ಲಿ ಹಲವು ನಟಿಯರು ಅಭಿನಯಿಸಿರುವುದರಿಂದ ಅವರ ಪಾತ್ರಗಳ ಬಗ್ಗೆ ಜನರಿಗೆ ಕೌತುಕ ಹೆಚ್ಚಿದೆ.

ಹೊಸ ಪೋಸ್ಟರ್ ನೋಡಿದ ಕೆಲವರು ಸೂಕ್ಷ್ಮವಾಗಿ ಗಮನಿಸಿ ಎಐ ಮೂಲಕ ರಚಿಸಿದ ಪೋಸ್ಟರ್ ಎಂದು ಹೇಳಿದ್ದಾರೆ. ಯಾಕೆಂದರೆ ಈ ಪೋಸ್ಟರ್​​ನಲ್ಲಿ ಕಿಯಾರಾ ಅಡ್ವಾಣಿ ಅವರ ಕೈ ವಿಚಿತ್ರವಾಗಿ ಕಾಣಿಸಿದೆ. ಸಹಜವಾಗಿ ಇರುವುದಕ್ಕಿಂತಲೂ ಹೆಚ್ಚು ಉದ್ದವಾಗಿದೆ. ಅದನ್ನು ನೋಡಿದ ಬಳಿಕ ಅನುಮಾನ ಮೂಡಿದೆ.

ಇಂದು ರಿಲೀಸ್ ಆಗಲಿರುವ ಮೊದಲ ಹಾಡಿಗೆ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದಾರೆ. ಇದರ ಕನ್ನಡ ವರ್ಷನ್​​ಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಆದ್ದರಿಂದ ಹೈಪ್ ಜಾಸ್ತಿ ಆಗಿದೆ. ಟ್ರೇಲರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ.

Ads on article

Advertise in articles 1

advertising articles 2

Advertise under the article