ಕಳೆದು ಹೋಗಿದ್ದ ವೆಡ್ಡಿಂಗ್​ ರಿಂಗ್​ 50 ವರ್ಷಗಳ ಬಳಿಕ ಪತ್ತೆ...!!

ಲಂಡನ್​: ಕಳೆದು ಹೋಗಿದ್ದ ವೆಡ್ಡಿಂಗ್​ ರಿಂಗ್​ 50 ವರ್ಷಗಳ ಬಳಿಕ ಪತ್ತೆಯಾಗಿರುವ ಘಟನೆ ಬ್ರಿಟನ್​ ಬಳಿಯ ಔಟರ್​ ಹೆಬ್ರಿಡೆಸ್​ ದ್ವೀಪದಲ್ಲಿ ನಡೆದಿದೆ. 

ಮೂರು ದಿನಗಳ ಹುಡುಕಾಟದ ಬಳಿಕ ಕೊನೆಗೂ ರಿಂಗ್​ ಪತ್ತೆಹಚ್ಚಲಾಗಿದೆ. ಪೆಗ್ಗಿ ಮ್ಯಾಕ್​ಸ್ವೀನಿ (86) ಎಂಬಾಕೆ 50 ವರ್ಷಗಳ ಹಿಂದೆ ತಮ್ಮ ಮನೆಯ ಮುಂಭಾಗದ ಆವರಣದಲ್ಲಿ ಆಲುಗೆಡ್ಡೆ ಸಂಗ್ರಹಿಸುವ ವೇಳೆ ಕೈ ಬೆರಳಿಂದ ಉಂಗುರ ಜಾರಿ ಕೆಳಗೆ ಬಿದ್ದಿತ್ತು. ಬಳಿಕ ಉಂಗುರಕ್ಕಾಗಿ ಸಾಕಷ್ಟು ಹುಡುಕಾಡಿದರೂ ಕೂಡ ಪ್ರಯೋಜನವಾಗಲಿಲ್ಲ. ಕೊನೆಗೆ ಮ್ಯಾಕ್​ಸ್ವೀನಿ ಅವರು ಹುಡುಕುವ ಭರವಸೆಯನ್ನೇ ಕಳೆದುಕೊಂಡರು.

 ಮೆಟಲ್​ ಡಿಟೆಕ್ಟರ್​ (ಲೋಹಪತ್ತೆಗಾರ)​ ಡೊನಾಲ್ಡ್​ ಮ್ಯಾಕ್​ಫೀ ಅವರು ಇತ್ತೀಚೆಗೆ ರಿಂಗ್​ ಕಳೆದು ಹೋಗಿರುವುದರ ಬಗ್ಗೆ ತಿಳಿದುಕೊಂಡರು. ಬಳಿಕ ಅದನ್ನು ಹುಡುಕುವ ನಿರ್ಧಾರ ಮಾಡಿ ಮ್ಯಾಕ್​ಸ್ವೀನಿ ಅವರ ಮನೆಗೆ ಹೋದರು. ಬಳಿಕ ರಿಂಗ್​ ಕಳೆದು ಹೋದ ಜಾಗದಲ್ಲಿ ಮೆಟಲ್​ ಡಿಟೆಕ್ಟರ್​ ಸಹಾಯದಿಂದ ಹುಡುಕಲು ಆರಂಭಿಸಿದ ಮ್ಯಾಕ್​ಫೀಗೆ ಮೊದಲ ದಿನ ರಿಂಗ್​ ಪತ್ತೆಯಾಗಲಿಲ್ಲ. ಎರಡನೇ ದಿನವೂ ನಿರಾಸೆ ಕಾದಿತ್ತು. ಮೂರನೇ ದಿನದ ಕಾರ್ಯಾಚರಣೆಗೆ ಇಳಿದ ಮ್ಯಾಕ್​ಫೀಗೆ ಅಚ್ಚರಿ ಕಾದಿತ್ತು. ಅದೇನೆಂದರೆ, 50 ವರ್ಷದ ಹಿಂದೆ ಕಳೆದು ಹೋಗಿದ್ದ ರಿಂಗ್​ ಮತ್ತೆ ಪತ್ತೆಯಾಯಿತು. ಈ ಬಗ್ಗೆ ಮಾತನಾಡಿರುವ ಮ್ಯಾಕ್​ಫೀ, ಇದು ಸ್ವಲ್ಪ ಭಾವನಾತ್ಮಕವಾಗಿದೆ ಎಂದಿದ್ದಾರೆ. ಉಂಗುರ ಕಳೆದುಹೋದ ಪ್ರದೇಶವು ಮದ್ಯ ಪ್ರಿಯರ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಒಟ್ಟು 5,000 ಚದರ ಮೀಟರ್ ಪ್ರದೇಶದಲ್ಲಿ 90 ಗಂಟೆಗಳ ಹುಡುಕಾಟದ ನಂತರ ಉಂಗುರವು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.