ಮಂಗಳೂರಿನಲ್ಲಿ ಅಪ್ರಾಪ್ತ ಯುವತಿಯ ಅತ್ಯಾಚಾರ ಗೈದು VIDEO ಮಾಡಿ ಬೆದರಿಕೆ ಪ್ರಕರಣ- ಆರೋಪಿಗೆ 15 ವರ್ಷ ಜೈಲು ಶಿಕ್ಷೆ
Friday, October 7, 2022
ಮಂಗಳೂರು : ಅಪ್ರಾಪ್ತ ವಯಸ್ಕ ಯುವತಿಯನ್ನು ಅತ್ಯಾಚಾರಗೈದು , ಆ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಆರೋಪಿಗೆ ಮಂಗಳೂರು ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ .
2019 ರಲ್ಲಿ ಈ ಘಟನೆ ನಡೆದಿತ್ತು. ಬಾಲಕಿ ನೀಡಿದ್ದ ದೂರಿನಂತೆ ಬಜಪೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆರೋಪಿ ತೋಡಾರ್ ಗ್ರಾಮದ ಸೀತಾರಾಮ ( 26 ) ನನ್ನು ಬಂಧಿಸಲಾಗಿತ್ತು .
ಆರೋಪಿ ಸೀತಾರಾಮ ಅವರ ಸಂಬಂಧಿ ಕೊಂಡೆಮೂಲ ಗ್ರಾಮದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದಿದ್ದನು. ಈ ಪ್ರಕರಣದಲ್ಲಿ ಸೀತಾರಾಮ ಪ್ರಥಮ ಆರೋಪಿಯಾಗಿದ್ದರೆ , ಮದುವೆ
ಮಾಡಿಕೊಡುವುದಾಗಿ ಹೇಳಿ ಮಧ್ಯ ಪ್ರವೇಶಿಸಿದ್ದ ನಾರಾಯಣ 2 ನೇ ಆರೋಪಿಯಾಗಿದ್ದನು .
ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಕೆ.ಆರ್ . ನಾಯಕ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು . ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -2 ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿ ತೋಡಾರ್ ಗ್ರಾಮದ ಸೀತಾರಾಮ ( 26 ) ನಿಗೆ 15 ವರ್ಷಗಳ ಜೈಲು ಮತ್ತು 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. 2 ನೇ ಆರೋಪಿ ನಾರಾಯಣನನ್ನು ಖುಲಾಸೆಗೊಳಿಸಿದ್ದಾರೆ .