UDUPI : ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಜೈಲು

ಮದುವೆಯಾಗುವುದಾಗಿ ಹೇಳಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ  20 ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಡವೂರು ನಿವಾಸಿ ಕಿರಣ್‌ (28)  ಆರೋಪಿ. ಸಂತ್ರಸ್ತ ಬಾಲಕಿ 16 ವರ್ಷದವಳಾಗಿದ್ದು ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ವೈರಲ್‌ ಮಾಡುವುದಾಗಿ ಬೆದರಿಸಿ  ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಆರೋಪಿ ಕಿರಣ್‌ನ ಸಹೋದರಿ ಯುವತಿ ಬಳಿ ಬಂದು ಆತನೊಂದಿಗೆ ಮದುವೆ ಮಾಡಿಸುವುದಾಗಿಯೂ ಈ ವಿಚಾರ ಯಾರಲ್ಲಿಯೂ ಹೇಳದಂತೆ ಮಾತುಕತೆ ನಡೆಸಿದ್ದಳು. 


ಸಂತ್ರಸ್ತೆ ಮನೆ ಸಮೀಪದವರು ಇವರಿಬ್ಬರ ಚಲನವಲನದ ಬಗ್ಗೆ ಬಾಲಕಿ ಪೋಷಕರ ಗಮನಕ್ಕೆ ತಂದಿದ್ದು ಅವರು ಆಕೆ ಬಳಿ ವಿಚಾರಿಸಿದಾಗ ನಡೆದ ಘಟನೆ ಹೇಳಿದ್ದಾಳೆ. ಬಳಿಕ ಉಡುಪಿ ಮಹಿಳಾ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಳು. ಅದರಂತೆ ಕಿರಣ್‌ ಹಾಗೂ ಆತನ ಸೋದರಿಯ ಬಂಧನವಾಗಿತ್ತು. ಬಳಿಕ ಅವರಿಬ್ಬರು ಜಾಮೀನು ಪಡೆದಿದ್ದರು. ಪೂರಕ ಸಾಕ್ಷಿಗಳು ಕಿರಣ್‌ ದೋಷಿ ಎಂಬುದನ್ನು ದೃಢಪಟ್ಟಿತು. ಕಿರಣ್‌ ಸಹೋದರಿ ಮೇಲಿನ ದೋಷಾರೋಪಣೆ ರುಜುವಾತಾಗದ ಹಿನ್ನೆಲೆ ದೋಷಮುಕ್ತಿಗೊಳಿಸಲಾಗಿದೆ. ಅಪರಾಧಿ ಕಿರಣ್‌ಗೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಪೋಕ್ಸೊ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಬೆದರಿಕೆ ಹಾಕಿದ್ದಕ್ಕೆ 1 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆ ಮತ್ತು ನೊಂದ ಬಾಲಕಿಗೆ 4 ಲ. ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ.