ಲೆನ್ಸ್‌ಕಾರ್ಟ್‌ನಲ್ಲಿ ಬಿಂದಿ, ತಿಲಕಕ್ಕೆ ನಿಷೇಧ? ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ; ಮೌನ ಮುರಿದ ಸಂಸ್ಥಾಪಕ ಪಿಯೂಷ್ ಬನ್ಸಾಲ್!
ಪ್ರಖ್ಯಾತ ಚಷ್ಮಾ ಮಾರಾಟ ಸಂಸ್ಥೆ 'ಲೆನ್ಸ್‌ಕಾರ್ಟ್' (Lenskart) ತನ್ನ ಉದ್ಯೋಗಿಗಳಿಗೆ ಧಾರ್ಮಿಕ ಚಿಹ್ನೆಗಳನ್ನು ಧರಿಸದಂತೆ ನಿರ್ಬಂಧ ಹೇರಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಂಪನಿಯ ಆಂತರಿಕ ನಿಯಮಾವಳಿ ಎನ್ನಲಾದ ಸ್ಕ್ರೀನ್‌ಶಾಟ್ ಒಂದು ವೈರಲ್ ಆಗಿದ್ದು, ಇದು ಹಿಂದೂ ವಿರೋಧಿ ನೀತಿ ಎಂಬ ಆಕ್ರೋಶ ವ್ಯಕ್ತವಾಗಿದೆ.
ವಿವಾದಕ್ಕೆ ಕಾರಣವಾದ ಪೋಸ್ಟ್ ಏನು?
ಲೇಖಕಿ ಶೆಫಾಲಿ ವೈದ್ಯ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಲೆನ್ಸ್‌ಕಾರ್ಟ್‌ನ ಸ್ಟೈಲ್ ಗೈಡ್‌ನಲ್ಲಿ ಉದ್ಯೋಗಿಗಳಿಗೆ ಬಿಂದಿ, ತಿಲಕ ಅಥವಾ ಕೈಗೆ ಕಟ್ಟುವ ಕಂಕಣ (ಕಲವ) ಧರಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಇದೇ ವೇಳೆ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
"ಹಿಂದೂ ಬಹುಸಂಖ್ಯಾತ ಭಾರತದಲ್ಲಿ, ಹಿಂದೂ ಗ್ರಾಹಕರು ಮತ್ತು ಉದ್ಯೋಗಿಗಳನ್ನೇ ನಂಬಿಕೊಂಡಿರುವ ಸಂಸ್ಥೆಯೊಂದು ಇಂತಹ ತಾರತಮ್ಯದ ನೀತಿ ಅನುಸರಿಸುತ್ತಿರುವುದು ಎಷ್ಟು ಸರಿ?" ಎಂದು ಅನೇಕರು ಪ್ರಶ್ನಿಸಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ #BoycottLenskart ಎಂಬ ಅಭಿಯಾನವೂ ಶುರುವಾಗಿತ್ತು.
ಟ್ವಿಟರ್‌ನಲ್ಲಿ ಭುಗಿಲೆದ್ದ ಆಕ್ರೋಶ
ನೆಟ್ಟಿಗರು ಲೆನ್ಸ್‌ಕಾರ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ತಿಲಕ ಮತ್ತು ಬಿಂದಿ ಧರಿಸುವುದರಿಂದ ಕಂಪನಿಗೆ ಆಗುವ ತೊಂದರೆ ಏನು? ಇದು ಅಪ್ಪಟ ದ್ವಂದ್ವ ನೀತಿ" ಎಂದು ಕಿಡಿಕಾರಿದ್ದರು. ಇನ್ನು ಕೆಲವು ಗ್ರಾಹಕರು ಇನ್ನು ಮುಂದೆ ನಾವು ಈ ಸಂಸ್ಥೆಯಿಂದ ಕನ್ನಡಕಗಳನ್ನು ಖರೀದಿಸುವುದಿಲ್ಲ ಎಂದು ಘೋಷಿಸಿದ್ದರು.
ಪಿಯೂಷ್ ಬನ್ಸಾಲ್ ನೀಡಿದ ಸ್ಪಷ್ಟನೆ ಏನು?
ವಿವಾದ ಕೈಮೀರುತ್ತಿರುವುದನ್ನು ಗಮನಿಸಿದ ಲೆನ್ಸ್‌ಕಾರ್ಟ್ ಸಂಸ್ಥಾಪಕ ಪಿಯೂಷ್ ಬನ್ಸಾಲ್, ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗುತ್ತಿರುವ ದಾಖಲೆ ಹಳೆಯದಾಗಿದ್ದು, ಅದು ಪ್ರಸ್ತುತ ಕಂಪನಿಯ ನೀತಿಯಲ್ಲ ಎಂದು ಅವರು ಹೇಳಿದ್ದಾರೆ.
"ವೈರಲ್ ಆಗುತ್ತಿರುವ ಪಾಲಿಸಿ ಡಾಕ್ಯುಮೆಂಟ್ ತಪ್ಪು ಮಾಹಿತಿಯಿಂದ ಕೂಡಿದೆ. ನಮ್ಮ ಈಗಿನ ಮಾರ್ಗಸೂಚಿಗಳಲ್ಲಿ ಬಿಂದಿ, ತಿಲಕ ಸೇರಿದಂತೆ ಯಾವುದೇ ಧಾರ್ಮಿಕ ಅಭಿವ್ಯಕ್ತಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ನಮ್ಮ ಉದ್ಯೋಗಿಗಳು ತಮ್ಮ ನಂಬಿಕೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸಬಹುದು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕ್ಷಮೆಯಾಚಿಸಿದ ಸಂಸ್ಥಾಪಕ
ಹಳೆಯ ನಿಯಮಾವಳಿಗಳಿಂದ ಉಂಟಾದ ಗೊಂದಲಕ್ಕೆ ಕ್ಷಮೆಯಾಚಿಸಿರುವ ಬನ್ಸಾಲ್, "ಲೆನ್ಸ್‌ಕಾರ್ಟ್ ಭಾರತೀಯರಿಂದ, ಭಾರತೀಯರಿಗಾಗಿ ಕಟ್ಟಲ್ಪಟ್ಟ ಸಂಸ್ಥೆ. ನಮ್ಮ ಸಂಪ್ರದಾಯ ಮತ್ತು ಚಿಹ್ನೆಗಳು ಕಂಪನಿಯ ಅವಿಭಾಜ್ಯ ಅಂಗ. ಇದನ್ನು ನಾವು ಎಂದಿಗೂ ಕಡೆಗಣಿಸುವುದಿಲ್ಲ," ಎಂದು ಭರವಸೆ ನೀಡಿದ್ದಾರೆ.
ಈ ಸ್ಪಷ್ಟನೆಯ ಮೂಲಕ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಲೆನ್ಸ್‌ಕಾರ್ಟ್ ವಿರುದ್ಧದ ಪ್ರತಿಭಟನೆಗೆ ತಣ್ಣೀರೆರಚಿದಂತಾಗಿದೆ.
.png)