ನಕ್ಸಲರ ಭಯಕ್ಕೆ ಊರು ಬಿಟ್ಟಿದ್ದ ಯೋಧ 14 ವರ್ಷಗಳ ಬಳಿಕ ತಾಯ್ನಾಡಿಗೆ ವಾಪಸ್; ಛತ್ತೀಸ್‌ಗಢದಲ್ಲಿ ಭಾವುಕ ಕ್ಷಣ!
ನಾರಾಯಣಪುರ: ಇದು ಕೇವಲ ಒಬ್ಬ ವ್ಯಕ್ತಿಯ ಘರ್ ವಾಪಸಿ ಸುದ್ದಿಯಲ್ಲ, ಬದಲಾಗಿ ದೇಶದಲ್ಲಿ ನಕ್ಸಲ್ವಾದ ಅಂತ್ಯವಾಗುತ್ತಿರುವ ಸಂಕೇತ. ನಕ್ಸಲರ ಅಟ್ಟಹಾಸ ಮತ್ತು ಪ್ರಾಣ ಬೆದರಿಕೆಯಿಂದಾಗಿ ಅಂದು ಮನೆ-ಮಠ ಬಿಟ್ಟು ಓಡಿಹೋಗಿದ್ದ ವ್ಯಕ್ತಿಯೊಬ್ಬರು, ಇಂದು ಅದೇ ನಕ್ಸಲರ ವಿರುದ್ಧ ಹೋರಾಡುವ ಯೋಧನಾಗಿ ಬರೋಬ್ಬರಿ 14 ವರ್ಷಗಳ ಬಳಿಕ ತನ್ನ ಹುಟ್ಟೂರಿಗೆ ಹೆಮ್ಮೆಯಿಂದ ಕಾಲಿಟ್ಟಿದ್ದಾರೆ.
ಯಾರು ಈ ಬುಧರಾಮ್ ವರ್ಧಾ?
ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಲ್ಬೇಡಾ ಗ್ರಾಮದ ನಿವಾಸಿ ಬುಧರಾಮ್ ವರ್ಧಾ ಅವರೇ ಈ ಸಾಹಸಿ ಯೋಧ. 2011-12ರ ಅವಧಿಯಲ್ಲಿ ಇವರ ಗ್ರಾಮ ನಕ್ಸಲರ ಸಂಪೂರ್ಣ ಕಪಿಮುಷ್ಟಿಯಲ್ಲಿತ್ತು. ನಕ್ಸಲರ ವಿರುದ್ಧ ಸೊಲ್ಲೆತ್ತಿದರೆ ಮರಣದಂಡನೆ ಖಚಿತ ಎಂಬ ಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ನಕ್ಸಲರಿಂದ ಜೀವ ಬೆದರಿಕೆ ಎದುರಿಸುತ್ತಿದ್ದ 25 ವರ್ಷದ ಬುಧರಾಮ್, ಅನಿವಾರ್ಯವಾಗಿ ತನ್ನ ಕುಟುಂಬದ ರಕ್ಷಣೆಗಾಗಿ ರಾತ್ರೋರಾತ್ರಿ ಊರು ಬಿಟ್ಟು ನಾರಾಯಣಪುರದ ನಿರಾಶ್ರಿತರ ಶಿಬಿರ ಸೇರಿದ್ದರು.
ಸಂತ್ರಸ್ತನಿಂದ ಯೋಧನವರೆಗೆ..
ಊರು ಬಿಟ್ಟರೂ ಬುಧರಾಮ್ ಅವರಲ್ಲಿ ನಕ್ಸಲರ ವಿರುದ್ಧದ ಆಕ್ರೋಶ ಮಾತ್ರ ಆರಿರಲಿಲ್ಲ. ತಮ್ಮಂತೆಯೇ ನೂರಾರು ಜನರು ಭಯದಲ್ಲಿ ಬದುಕುವುದನ್ನು ತಪ್ಪಿಸಬೇಕೆಂದು ನಿರ್ಧರಿಸಿದ ಅವರು ಪೊಲೀಸ್ ಪಡೆಗೆ ಸೇರಿದರು. ನಂತರ ಛತ್ತೀಸ್‌ಗಢ ಸರ್ಕಾರದ ವಿಶೇಷ ಪಡೆಯಾದ ಡಿಆರ್‌ಜಿ (ಜಿಲ್ಲಾ ಮೀಸಲು ಪಡೆ) ಸೇರ್ಪಡೆಯಾಗಿ ನಕ್ಸಲರ ವಿರುದ್ಧದ ಹಲವಾರು ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಬೈಕ್‌ನಲ್ಲಿ ಬಂದ ಜಿಲ್ಲಾಧಿಕಾರಿ ಮತ್ತು ಯೋಧ!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಕಾರ್ಯಾಚರಣೆಯಿಂದಾಗಿ ಇಂದು ಛತ್ತೀಸ್‌ಗಢದ ದಟ್ಟ ಅರಣ್ಯಗಳಲ್ಲಿ ಶಾಂತಿ ನೆಲೆಸುತ್ತಿದೆ. ಏಪ್ರಿಲ್ 13 ರಂದು ಬುಧರಾಮ್ ಅವರು 14 ವರ್ಷಗಳ ಬಳಿಕ ತಮ್ಮ ಅಲ್ಬೇಡಾ ಗ್ರಾಮಕ್ಕೆ ಮರಳಿದರು. ವಿಶೇಷವೆಂದರೆ, ನಾರಾಯಣಪುರದ ಜಿಲ್ಲಾಧಿಕಾರಿ ನಮ್ರತಾ ಜೈನ್ ಅವರೇ ಸ್ವತಃ ಬೈಕ್ ಚಲಾಯಿಸಿಕೊಂಡು ಬುಧರಾಮ್ ಅವರನ್ನು ಗ್ರಾಮಕ್ಕೆ ಕರೆತಂದರು. ಊರಿನ ಗಡಿಯೊಳಗೆ ಕಾಲಿಡುತ್ತಿದ್ದಂತೆ ಬುಧರಾಮ್ ಅವರ ಕಣ್ಣಾಲಿಗಳು ಭಾವುಕತೆಯಿಂದ ತುಂಬಿ ಬಂದವು.
ಮನೆ ಹೋದರೂ ಮನಸ್ಸು ಗೆದ್ದರು..
"ಊರಿನಲ್ಲಿದ್ದ ನನ್ನ ಹಳೆಯ ಮನೆ ಈಗ ನೆಲಸಮವಾಗಿದೆ. ನಕ್ಸಲರ ಹಿಂಸಾಚಾರದಿಂದ ಇಲ್ಲಿನ ಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ಈಗ ಗ್ರಾಮವು ನಕ್ಸಲ್ ಮುಕ್ತವಾಗಿದೆ ಎಂಬುದು ದೊಡ್ಡ ಸಮಾಧಾನ. ಈಗ ಇಲ್ಲಿ ಶಾಲೆಗಳು, ಅಂಗನವಾಡಿಗಳು ಮತ್ತು ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಬೇಕಿದೆ" ಎಂದು ಬುಧರಾಮ್ ಆಶಯ ವ್ಯಕ್ತಪಡಿಸಿದ್ದಾರೆ.
ನಕ್ಸಲ್ ಮುಕ್ತ ಭಾರತದತ್ತ ಹೆಜ್ಜೆ:
ಕಳೆದ ಮಾರ್ಚ್ 31 ರಿಂದ ದೇಶವನ್ನು ಸಂಪೂರ್ಣ ನಕ್ಸಲ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಸಾವಿರಾರು ನಕ್ಸಲರು ಶರಣಾಗುತ್ತಿದ್ದು, ಸರ್ಕಾರದ ಪುನರ್ವಸತಿ ಯೋಜನೆಗಳ ಅಡಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಮರಳುತ್ತಿದ್ದಾರೆ. ಬುಧರಾಮ್ ಅವರ ಈ ಪುನರಾಗಮನವು ಸಾವಿರಾರು ವಲಸಿಗರಿಗೆ ಸ್ಫೂರ್ತಿಯಾಗಿದೆ.
.png)