ಕಾಮಗಾರಿಯ ವಿವರ ಸಂಗ್ರಹಿಸಲು ಪ್ರತ್ಯೇಕ ತಂಡ ರಚನೆ - ಶಾಸಕ ಕಾಮತ್


ಸ್ಮಾರ್ಟ್ ಸಿಟಿ - ಕುಡ್ಸೆಂಪ್ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ‌ ಸಭಾಂಗಣದಲ್ಲಿ ನಡೆಯಿತು.

ಕುಡಿ ನೀರು ಸರಬರಾಜು ಹಾಗೂ ಯುಜಿಡಿ ಕಾಮಗಾರಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ದೂರುಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿ ಸಭೆ ನಡೆಸಲಾಗಿದ್ದು ಸಮಸ್ಯೆ ಬಗೆಹರಿಸಲು ಶಾಸಕ ವೇದವ್ಯಾಸ್ ಕಾಮತ್ ಅವರು ಸೂಚನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಈಗಾಗಲೇ ಸ್ಮಾರ್ಟ್ ಸಿಟಿ ಹಾಗೂ ಕುಡ್ಸೆಂಪ್ ಯೋಜನೆಗಳ ಅನೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ಈಗ ಪ್ರಗತಿ ಹಂತದಲ್ಲಿರುವ ಪ್ರತಿಯೊಂದು ಕಾಮಗಾರಿಗಳೂ ಕೂಡ ಯಾವ ಹಂತದಲ್ಲಿದೆ, ಹಾಗೂ ಕಾಮಗಾರಿಯ ವಿವರ ಸಂಗ್ರಹಿಸಲು ಮನಪಾ ಸದಸ್ಯರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಹಾಗೂ ಕುಡ್ಸೆಂಪ್ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ತಂಡ ರಚಿಸಿ ಈಗ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ವಿವರ ಪಡೆಯಲು ನಿರ್ಧರಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ತಾಂತ್ರಿಕ ತಂಡ ಮಂಗಳೂರು ನಗರದಲ್ಲಿ ನಗರ ಪಾಲಿಕೆ,ಕುಡ್ಸೆಂಪ್ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ   ಈಗಾಗಲೇ ಪೂರ್ಣಗೊಂಡಿರುವ ಅಥವ ಪ್ರಗತಿ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಿದೆ. ಕಾಮಗಾರಿಯಲ್ಲಿ ದೋಷಗಳು ಕಂಡು ಬಂದರೆ ಅದನ್ನು ಸರಿಪಡಿಸಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳ‌ ಜೊತೆ ಚರ್ಚಿಸಲಾಗುವುದು ಎಂದರು.

ನಗರದಲ್ಲಿ ಪ್ರತಿಮನೆಗೂ ದಿನದ 24 ಗಂಟೆ ಕುಡಿಯುವ  ನೀರು ಒದಗಿಸುವ ಅಮೃತ್ ಯೋಜನೆ ಕಾಮಗಾರಿಯ ಕುರಿತು ಮಾಹಿತಿ ಪಡೆಯಲಾಗಿದೆ. ನಗರದಲ್ಲಿ ನೀರು ಸರಬರಾಜಿಗೆ ಗುರುತಿಸಿರುವ 48 ಝೋನ್ ಗಳ ಪೈಕಿ 18 ಝೋನ್ ಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಝೋನ್ ಗಳ ಸರ್ವೆ ಕಾರ್ಯಗಳು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಪೈಪ್ ಲೈನ್ ಗಳ ಪುನರ್ ಪರಿಶೀಲನೆ,ಪಂಪಿಂಗ್ ವ್ಯವಸ್ಥೆಗಳ ಪರಿಶೀಲನೆ ನಡೆಸಿ‌ ಸಂಪೂರ್ಣ ವರದಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ್ಮಾರ್ಟ್ ಸಿಟಿ ಅಧಿಕಾರಿ ಮೊಹಮ್ಮದ್ ನಜೀರ್,ಕುಡ್ಸೆಂಪ್ ಪ್ರಾಜೆಕ್ಟ್ ಡೈರೆಕ್ಟರ್ ಮಂಜುನಾಥ್, ಪಾಲಿಕೆ ಸ್ಥಾಯಿ ಸಮಿತಿ ಅದ್ಯಕ್ಷ ಪ್ರೇಮಾನಂದ ಶೆಟ್ಟಿ, ಎಸ್.ಇ.ಝೆಡ್ ಅಧಿಕಾರಿಗಳು, ಪಾಲಿಕೆ ಸದಸ್ಯರು, ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ಹನುಮಂತ ಕಾಮತ್, ಧರ್ಮರಾಜ್, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮನಪಾ ಅಧಿಕಾರಿಗಳು, ಕುಡ್ಸೆಂಪ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments