ಎನ್‍ಐಟಿಕೆ ಆವರಣದಲ್ಲಿ ಸಿಐಎಸ್‍ಎಫ್ ವಿಶ್ವ ಪರಿಸರ ದಿನಾಚರಣೆ


ಮಂಗಳೂರು ;- ಸುರತ್ಕಲ್‍ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್‍ಐಟಿಕೆ) ದಲ್ಲಿ ಎಂಆರ್‍ಪಿಎಲ್‍ನ ಕೆಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‍ಎಫ್) ಜಂಟಿ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 15ರಂದು ಸಂಸ್ಥೆಯ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
       ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿಐಎಸ್‍ಎಫ್‍ನ ಡೆಪ್ಯುಟಿ ಕಮಾಂಡೆಂಟ್  ಮೃತ್ಯುಂಜಯ ಸ್ವಾಮಿ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
      ಈ ಸಂಧರ್ಭದಲ್ಲಿ ಮಾತನಾಡಿದ ಅವರು ಎಂಆರ್‍ಪಿಎಲ್‍ನ ಸಿಐಎಸ್‍ಎಫ್ ಘಟಕವು ಈ ವರ್ಷ 6000 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಯೋಜನೆಗೆ ಎನ್‍ಐಟಿಕೆ ಕೂಡ ಸಹಕಾರ ನೀಡಲಿದೆ ಎಂದು ಘೋಷಿಸಿದರು. ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆ ನಮಗಾಗಿ ಏನು ಮಾಡಿದ್ದೀರಿ ಎಂದರೆ ನಾವು ಈ ಗಿಡಮರಗಳನ್ನು ತೋರಿಸಬಹುದು. ಇವುಗಳೇ ನಾವು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದು ತಿಳಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್‍ಐಟಿಕೆ ಸುರತ್ಕಲ್‍ನ ಉಪ ನಿರ್ದೇಶಕ ಪ್ರೊ. ಅನಂತನಾರಾಯಣ ವಿ ಎಸ್ ಮಾತನಾಡಿ, ಸಿಐಎಸ್‍ಎಫ್‍ನ ಸಹಯೋಗದೊಂದಿಗೆ ನೆಟ್ಟ ಎಲ್ಲಾ ಗಿಡಗಳನ್ನು ಮುತುವರ್ಜಿಯಿಂದ ನೋಡಿಕೊಂಡು ಅವುಗಳನ್ನು ಮುಂದಿನ ಪೀಳಿಗೆಗೆ ಆಸ್ತಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದೇ ಸಂಧರ್ಭದಲ್ಲಿ ಅವರು ಸಿಐಎಸ್‍ಎಫ್ ದೇಶಕ್ಕಾಗಿ ಮಾಡುತ್ತಿರುವ ಸೇವೆಗಾಗಿ ಎಲ್ಲಾ ಸಿಬ್ಬಂದಿಗಳನ್ನು ಶ್ಲಾಘಿಸಿದರು.
       ಈ ಸಂದರ್ಭದಲ್ಲಿ ಎನ್‍ಐಟಿಕೆ ಕುಲಸಚಿವ ಕೆ ರವೀಂದ್ರನಾಥ್, ಜಂಟಿ ಕುಲಸಚಿವ ರಾಮ್‍ಮೋಹನ್, ಕಾರ್ಯಕ್ರಮ ಸಂಯೋಜಕ ಪ್ರೊ. ರಾಜ್‍ಮೋಹನ್ ಹಾಗೂ ಡಾ. ಅರುಣ್ ಎಂ ಇಸ್ಲೂರ್, ಎಲ್ಲಾ ವಿಭಾಗಗಳ ಡೀನ್‍ಗಳು, ಸಂಸ್ಥೆಯ ಸಿಬ್ಬಂದಿಗಳು ಮತ್ತು ಎಂಆರ್‍ಪಿಎಲ್ ಯುನಿಟ್‍ನ ಸಿಐಎಸ್‍ಎಫ್ ಸಿಬ್ಬಂದಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಎಲ್ಲರೂ ಕೂಡ ಸಸಿಗಳನ್ನು ನೆಟ್ಟರು.

Comments