ಮಂದಾರ ಕೇಶವ ಭಟ್ ಮನೆ ಉಳಿಸಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ


ಮಂಗಳೂರು :- ತುಳುವಿನ ಮಹಾಕವಿ, ತುಳು ವಾಲ್ಮೀಕಿ ಎಂದೇ ಪ್ರಸಿದ್ಧರಾದ, ತುಳುವಿಗೆ ಆಕರ ಗ್ರಂಥವನ್ನು ನೀಡಿದ “ಮಂದಾರ ರಾಮಾಯಣ” ಗ್ರಂಥದ ಕರ್ತೃ ಮಂದಾರ ಕೇಶವ ಭಟ್ ರವರು ಹುಟ್ಟು ವಾಸಿಸಿದ ಪಾರಂಪರಿಕ ಮನೆಯು ಶತಮಾನ ಕಂಡು, ಇತ್ತೀಚೆಗೆ ಸಂಭವಿಸಿದ ಮಾನವ ನಿರ್ಮಿತ ತ್ಯಾಜ್ಯ ದುರಂತದಲ್ಲಿ ಸಂಪೂರ್ಣ ಹಾನಿಗೀಡಾಗಿದ್ದು ವಿನಾಶದ ಅಂಚಿನಲ್ಲಿದೆ.ಮಂದಾರರ ಜನ್ಮಶತಮಾನೋತ್ಸವ ಸಂದರ್ಭದಲ್ಲಿಯೂ ಈ ದುರಂತ ಸಂಭವಿಸಿರುವುದು ತುಳುನಾಡಿಗೆ ಬಂದಂತಹ ಘೋರದುರಂತ. ಮುಂದಿನ ಪೀಳಿಗೆಗಾಗಿ ಈ ಮಹಾಕವಿಯ ವಾಸ್ತುವಿನ್ಯಾಸವುಳ್ಳ ಮನೆಯನ್ನು ಉಳಿಸಿ ಸುಂದರ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿದು, ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನ ಕೇಂದ್ರವನ್ನಾಗಿ ಮಾಡಬೇಕು, ನಾಡು ಕಂಡಂತಹ ಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರವನ್ನು ತುಳುವಿಗೆ ತಂದುಕೊಟ್ಟ, ತುಳು ಸಾಹಿತ್ಯ ಅಕಾಡೆಮಿಯ ಪ್ರಪ್ರಥಮ ಪ್ರಶಸ್ತಿ ಪುರಸ್ಕøತ, ರಾಜ್ಯಪ್ರಶಸ್ತಿ ವಿಜೇತ ಮಂದಾರ ಕೇಶವ ಭಟ್ಟರ ನೆನಪು ಅಜರಾಮರವಾಗಿರುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ತನ್ನ ವ್ಯಾಪ್ತಿಯಲ್ಲಿ ಸಂಪೂರ್ಣ ಸಹಕಾರ ನೀಡಲಿದೆ. ಈ ಮಹತ್ಕಾರ್ಯದಲ್ಲಿ ಜಿಲ್ಲಾಡಳಿತ, ಕ.ಸಾ.ಪ., ಮ.ನ.ಪಾ, ಜನ ಪ್ರತಿನಿಧಿಗಳು, ತುಳು ಸಂಘ ಸಂಸ್ಥೆಗಳು ಹಾಗೂ ತುಳು ಭಾಷಿಕರ ಸರ್ವ ಸಹಕಾರ ಅಗತ್ಯವಿದೆಯೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Comments