ಕುದ್ರೋಳಿ ಕೆರೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ


ಮಂಗಳೂರು ನಗರದ ಕುದ್ರೋಳಿ ಜುಮ್ಮಾ ಮಸೀದಿಯ ಕೆರೆ ಅಭಿವೃದ್ಧಿಗೆ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ‌ ಕಾಮತ್, ಮಂಗಳೂರು ನಗರ ಪಾಲಿಕೆಯ ಕುದ್ರೋಳಿ ವಾರ್ಡಿನ ಜುಮ್ಮಾ ಮಸೀದಿಯ ಅವರಣದಲ್ಲಿ ಇರುವ ಕೆರೆ ಅಭಿವೃದ್ಧಿಗೆ ಸ್ಥಳೀಯ ಬಿಜೆಪಿ ಮುಖಂಡರಾದ ಅರ್ಶಾದ್ ಕುದ್ರೋಳಿ ಅವರು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗಿದ್ದು ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು ಎಂದಿದ್ದಾರೆ.

ಅಂತರ್ಜಲ ವೃದ್ಧಿಗೆ ಕೆರೆಗಳ ಅಭಿವೃದ್ಧಿ ಪೂರಕವಾಗಿದೆ. ಹಾಗಾಗಿ ಪಾಳು ಬಿದ್ದಿರುವ ಅಥವ‌ ಜೀರ್ಣಾವಸ್ಥೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ನಾವು ವಿಶೇಷ ಮುತುವರ್ಜಿ ವಹಿಸಿ ಎಲ್ಲಾ ಕೆರೆಗಳ ಅಭಿವೃದ್ಧಿಪಡಿಸಲಾಗುವುದು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾಗಿರುವ‌ ರವಿಶಂಕರ್ ಮಿಜಾರ್ ಮಾತನಾಡಿ, ಮಂಗಳೂರು ನಗರದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಉಂಟಾಗುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆಗಳ ಅಭಿವೃದ್ಧಿಯೂ ಕೂಡ ಮಹತ್ತರವಾದ ಕೊಡುಗೆ ನೀಡಬಹುದು. ಹಾಗಾಗಿ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. 

ಸ್ಥಳೀಯರಾದ ರಂಗನಾಥ್ ಅವರು ಮಾತನಾಡಿ, ಕೆರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಮ್ಮ ವಾರ್ಡಿನ ಬಿಜೆಪಿ ಮುಖಂಡ ಅರ್ಷಾದ್ ಅವರು ಶಾಸಕರನ್ನು ಭೇಟಿ ಮಾಡಿ ಕೆರೆ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿತ್ತು. ಆ ಸಂಧರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು. ಅವರಿಗೆ ವಾರ್ಡಿನ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.‌

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್, ಸ್ಥಳೀಯ ಪಾಲಿಕೆ ಸದಸ್ಯರಾದ ಶಂಶುದ್ದೀನ್, ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿಯ ಖತೀಬರಾದ ರಿಯಾಯ್ ಫೈಯಿ ಕಕ್ಕಿಂಜೆ, ಸ್ಥಳೀಯ ಬಿಜೆಪಿ ಮುಖಂಡರಾದ ಅರ್ಷಾದ್ ಪೋಪಿ,ಭವಾನಿ ಶಂಕರ್, ರಂಗನಾಥ್,ರಾಜೇಶ್, ಶ್ಯಾಮ ಸುಂದರ್, ಮಸೀದಿಯ ಅದ್ಯಕ್ಷರಾದ ಪಝಲ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾರಿಸ್,ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Comments