ಕೊರೋನಾ ಸೋಂಕಿತರ ಚಿಕಿತ್ಸೆಗೆ ದರ ನಿಗದಿಪಡಿಸಿದ ಸರ್ಕಾರದ ಕ್ರಮ ವಿರೋಧಿಸಿ, ಕಡ್ಡಾಯ ಉಚಿತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ


ತೊಕ್ಕೊಟ್ಟು ; ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ರಾಜ್ಯ ಸರಕಾರ ದರ ನಿಗದಿ ಮಾಡಿರುವುದನ್ನು ವಿರೋಧಿಸಿ, ಪ್ರಸ್ತಾಪ ವಾಪಾಸು ಪಡೆಯಬೇಕು ಮತ್ತು ಎಲ್ಲಾ ಸೋಂಕಿತರಿಗೆ ಕಡ್ಡಾಯವಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ವತಿಯಿಂದ ತೊಕ್ಕೊಟ್ಟು ನಾಡ ಕಚೇರಿ ಮುಂಭಾಗ ಭಿತ್ತಿಪತ್ರ ಪ್ರದರ್ಶನ ನಡೆಸಿ ಅಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಸಮಾನ್ಯ ರೋಗಿಗೆ ಸಾಮಾನ್ಯ ವಾರ್ಡ್ ನಲ್ಲಿ ₹/10000, ಆಮ್ಲ ಜನಕ ಸಹಿತ ವಾರ್ಡ್ ನಲ್ಲಿ ₹12,000/-, ಐಸಿಯು ಹಾಸಿಗೆ- ₹15,000/-, ವೆಂಟಿಲೇಟರ್ ಸಹಿತ ಐಸಿಯು ಗೆ ₹25,000/- ದರ ನಿಗದಿಗೊಳಿಸಿದೆ.ಇದಕ್ಕೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್ ಗೆ ₹5,200, ಆಮ್ಲಜನಕ ಸಹಿತ ವಾರ್ಡ್ ಗೆ ₹7000, ತೀವ್ರ ನಿಗಾ ಘಟಕಕ್ಕೆ ₹8500, ಹಾಗೂ ವೆಂಟಿಲೇಟರ್ ಸಹಿತ ಐಸಿಯು ಗೆ 10,000 ನಿಗದಿಗೊಳಿಸಿ ವರದಿ ಸಿದ್ದಪಡಿಸಿದೆ. ಆದರೆ ಗ್ರಾಮೀಣ, ನಗರ ಪ್ರದೇಶದ ಬಹುತೇಕರು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೊಳಪಟ್ಟಿಲ್ಲವೆಂಬುದು ವಾಸ್ತವ.

ಕರೋನಾ ಸೋಂಕಿತ ರೋಗಿ ಉದಾಹರಣೆಗೆ ಚಿಕಿತ್ಸೆಗಾಗಿ ಕನಿಷ್ಠ ಹತ್ತು ದಿನಗಳ ವರೆಗೆ ಸಾಮಾನ್ಯವಾರ್ಡ್ ನಲ್ಲಿ ಚಿಕಿತ್ಸೆ ಪಡೆದರೂ ದಿನಕ್ಕೆ 10,000 ದಂತೆ ಹತ್ತು ದಿನಕ್ಕೆ ಒಂದು ಲಕ್ಷ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮತ್ತೆ ಕೋವಿಡ್ ಸಾಂಕ್ರಾಮಿಕ ಅಂಟು ರೋಗವಾದ್ದರಿಂದ ಮನೆಯಲ್ಲಿ ಮೂರ್ನಾಲ್ಕು ಜನಕ್ಕೇನಾದರೂ ಸೋಂಕು ತಗಲಿದರೆ ನಾಲ್ಕು ಲಕ್ಷ ಹಣವನ್ನು ಭರಿಸಬೇಕಾಗುತ್ತದೆ. ಸರಕಾರವೇ ಮುಂದೆ ನಿಂತು ಖಾಸಗಿಯವರಿಗೆ ಸುಲಿಗೆಗೆ ಅವಕಾಶ ಮಾಡಿಕೊಡುವ ರೀತಿಯ ಈ ನಡೆ ನ್ಯಾಯಯುತವಾದುದಲ್ಲ ಎಂದು ಅವರು ಹೇಳಿದರು.

ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ನಾಯಕರಾದ ಜೀವನ್ ರಾಜ್ ಕುತ್ತಾರ್ , ರಫೀಕ್ ಹರೇಕಳ , ಸಿಪಿಐಎಂ ಮುಖಂಡ ಮಹಾಬಲ ದೆಪ್ಪಲಿಮಾರ್, ವಲಯ ಕಾರ್ಯದರ್ಶಿ ಸುನಿಲ್ ತೇವುಲ, ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು, ಪ್ರಜ್ಞೆಶ್ ಚೆಂಬುಗುಡ್ಡೆ, ಕಿರಣ್ ಅಂಬ್ಲಮೊಗರು ಉಪಸ್ಥಿತರಿದ್ದರು.

Comments