ವಿರೋಧದ ನಡುವೆ ಬೋಳಾರ ಮಸೀದಿ ದಫನ ಭೂಮಿಯಲ್ಲಿ ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆ

ಕೊರೊನಕ್ಕೆ ಬಲಿಯಾದ ಯುವಕನ ಅಂತ್ಯ ಸಂಸ್ಕಾರವನ್ನು ಬೋಳಾರದ ಮಸೀದಿಯ ಆವರಣದಲ್ಲಿರುವ ದಫನ ಭೂಮಿಯಲ್ಲಿ ನಡೆಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಕೂಡ ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್ ‌ರ ಮಧ್ಯಪ್ರವೇಶದಿಂದ ಬೋಳಾರದಲ್ಲೇ ದಫನ ಕಾರ್ಯವನ್ನು ಸಂಜೆಯ ಸುಮಾರಿಗೆ ನೆರವೇರಿಸಲಾಯಿತು.

ಕೊರೋನ ವೈರಸ್ ಸೋಂಕಿನಿಂದ ಸುರತ್ಕಲ್ ಸಮೀಪದ ಇಡ್ಯದ  ಯುವಕ ಶನಿವಾರ ರಾತ್ರಿ ಮೃತಪಟ್ಟಿದ್ದರು. ಇವರ ದಫನ ಕಾರ್ಯವು ಇಡ್ಯದ ಮಸೀದಿಗೊಳಪಟ್ಟ ದಫನ ಭೂಮಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿನ ಕಬರ್ ಗುಂಡಿಯಲ್ಲಿ ನೀರು ಹರಿದು ಬರುತ್ತಿರುವುದರಿಂದ ಮಸೀದಿಯ ಪದಾಧಿಕಾರಿಗಳ ಮತ್ತು ಸಮುದಾಯದ ಮುಖಂಡರ ಮನವಿಯ ಮೇರೆಗೆ ರವಿವಾರ ಬೆಳಗ್ಗೆಯೇ ಬೋಳಾರದ ಮಸೀದಿಯ ಆವರಣದ ದಫನ ಭೂಮಿಯಲ್ಲಿ ದಫನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಅಷ್ಟರಲ್ಲಿ ಮಸೀದಿಗೆ ಸಂಬಂಧ ವಿಲ್ಲದ ಸ್ಥಳೀಯ ಕೆಲವು ಮಂದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಬೋಳಾರದ ಮಸೀದಿಯಲ್ಲಿ ದಫನ ಮಾಡುವ ಕಾರ್ಯ ವನ್ನು ಕೈ ಬಿಟ್ಟು ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಇಡ್ಯಾಕ್ಕೆ ಕೊಂಡೊಯ್ಯಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಮೃತದೇಹವನ್ನು ಮತ್ತೆ ಬೋಳಾರಕ್ಕೆ ತರುವಂತೆ ಸೂಚಿಸಿದರು. ಅಲ್ಲದೆ ತಕ್ಷಣ ಬೋಳಾರಕ್ಕೆ ಧಾವಿಸಿ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುವವರ ಜೊತೆ ಮಾತುಕತೆ ನಡೆಸಿ, ಮನವೊಲಿಸಿದರು.

ಬೋಳಾರ ಪರಿಸರದ ಯಾರೇ ಕೊರೋನಕ್ಕೆ ಬಲಿಯಾದರೆ ಅವರ ಅಂತ್ಯಸಂಸ್ಕಾರಕ್ಕೆ ನಮ್ಮ ವಿರೋಧವಿಲ್ಲ. ಕೊರೋನಕ್ಕೆ ಬಲಿಯಾದ ಹೊರಗಿನ ವ್ಯಕ್ತಿಗಳನ್ನು ಇಲ್ಲಿ ಅಂತ್ಯಸಂಸ್ಕಾರ ನಡೆಸುವುದು ಸರಿಯಲ್ಲ. ಅದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸ್ಥಳೀಯರು ತಿಳಿಸಿದ್ದರು.

ಮುಂದಿನ ಪ್ರಕರಣಗಳ ಬಗ್ಗೆ ಆಮೇಲೆ ನಿರ್ಧರಿಸೋಣ. ಇದೀಗ ಇಲ್ಲಿ ಎಲ್ಲಾ ಸಿದ್ಧತೆ ನಡೆಸಲಾಗಿದೆ. ಹಾಗಾಗಿ ವಿರೋಧ ವ್ಯಕ್ತಪಡಿಸದೆ ದಫನ ಕಾರ್ಯಕ್ಕೆ ಅವಕಾಶ ಮಾಡಿಕೊಡಿ ಎಂದು ಸಹಾಯಕ ಆಯುಕ್ತರು ಸೂಚಿಸಿದರು. ಅಂತಿಮವಾಗಿ ವಿರೋಧ ವ್ಯಕ್ತಪಡಿಸುವವರು ಸಹಮತ ವ್ಯಕ್ತಪಡಿಸಿದರು. ಆ ಬಳಿಕ ಸಂಜೆಯ ಸುಮಾರಿಗೆ ಬೋಳಾರದ ಮಸೀದಿಯ ಆವರಣದಲ್ಲೇ ದಫನ ಕಾರ್ಯ ನೆರವೇರಿಸಲಾಯಿತು.

Comments