ಮೋದಿ ಸರಕಾರದ ಸಾಧನೆ ಮನೆಮನೆ ತಲುಪಿಸುವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಚಾಲನೆ


ಮಂಗಳೂರು;ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಜನರಿಗೆ ಬರೆದಿರುವ “ನೀವು ಪ್ರೇರಕರು ನಾನು ಸೇವಕ” ಎಂಬ ಪತ್ರದ ಸಾರಾಂಶ ಹಾಗೂ ಒಂದು ವರ್ಷದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಪಾಂಡೇಶ್ವರದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಕೋವಿಡ್ 19ನಿಂದ ದೇಶ ಸಂಕಷ್ಟದಲ್ಲಿದ್ದರೂ ಆರ್ಥಿಕವಾಗಿ ಮೇಲೆತ್ತುವಲ್ಲಿ ಸರಕಾರದ ಕಾರ್ಯ ವಿಶೇಷವಾದದ್ದು. ಲಾಕ್ ಡೌನ್ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀ ಕರೆಗೆ ಭಾರತೀಯರು ಸ್ಪಂದಿಸಿದ ರೀತಿ ಜನರಿಗೆ ಸರಕಾರದ ಮೇಲಿರುವ ನಂಬಿಕೆಯ ಪ್ರತೀಕವಾಗಿದೆ. ಕಳೆದ ಒಂದು ವರ್ಷದ ಸಾಧನೆಯ ಕುರಿತು ಹಾಗೂ ದೇಶದ ಜನರಿಗೆ ಪ್ರಧಾನಮಂತ್ರಿಗಳು ಬರೆದಿರುವ ಪತ್ರದ ಸಾರಾಂಶವನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 1 ಮನೆಗೆ ಇಬ್ಬರಂತೆ ತೆರಳಿ ಜನತೆಗೆ ಸರಕಾರದ ಸಾಧನೆಯ ತಿಳಿಸಲಾಗುವುದು ಎಂದರು.

ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎರಡನೇ ಅವಧಿಯ ಪ್ರಥಮ ವರ್ಷ ಪೂರೈಸುತ್ತಿದ್ದು ಈ ಸಂಧರ್ಭದಲ್ಲಿ ಸರಕಾರ ಕೈಗೆತ್ತಿಕೊಂಡ ಗಟ್ಟಿ ನಿರ್ಧಾರಗಳ ಕುರಿತು ದೇಶದ ಜನತೆಗೂ ಹೆಮ್ಮೆಯಿದೆ. ಸ್ವಾತಂತ್ರ್ಯ ನಂತರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಜನರಿಗೆ ನೀಡಿದ್ದ ವಾಗ್ದಾನವನ್ನು ಪೂರ್ಣಗೊಳಿಸಿದೆ. ಅನೇಕ ವರ್ಷಗಳಿಂದ ವಿವಾದದ ಸುಳಿಯಾಗಿದ್ದ ರಾಮ ಮಂದಿರದ ತೀರ್ಪಿನ ಸಂಧರ್ಭದಲ್ಲೂ ಸರಕಾರ ಕೈಗೆತ್ತಿಕೊಂಡ ಕ್ರಮಗಳು ಜನರಿಗೆ ಹೊಸ ಭರವಸೆ ಮೂಡಿಸಿದೆ. ಲಾಕ್ ಡೌನ್ ಸಂಧರ್ಭದಲ್ಲಿ 2೦ ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಜನರ ಸಂಕಟ್ಟಕ್ಕೆ ಹೆಗಲು ನೀಡಿದೆ. ಸರಕಾರದ ಎಲ್ಲಾ ಸಾಧನೆಗಳನ್ನು ಮಂಗಳೂರು ನಗರ ದಕ್ಷಿಣದ ಪ್ರತಿ ಮನೆಗೂ ಬಿಜೆಪಿ ಕಾರ್ಯಕರ್ತರು ತಲುಪಿಸುವ ಕಾರ್ಯವಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಬಿಜೆಪಿ ಮಂಡಲ ಅದ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಜೆ. ಸುರೇಂದ್ರ, ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಕಿರಣ್ ರೈ ಮತ್ತಿರರು ಉಪಸ್ಥಿತರಿದ್ದರು.

Comments