ಶಾಲೆ ಆರಂಭಿಸಲು ಆತುರದ ನಿರ್ಧಾರ ಯಾಕೆ; ಐವನ್ ಪ್ರಶ್ನೆ


ಮಂಗಳೂರು;ಕೊರೋನಾ ಸೋಂಕಿನಿಂದ ಮಕ್ಕಳು ಅತೀ ಹೆಚ್ಚು ಬಲಿಯಾಗುತ್ತಿದ್ದಾರೆ. ಆದರೆ ಶಾಲೆ ಆರಂಭಿಸುವ ಬಗ್ಗೆ ಮಾತ್ರ ಸರಕಾರ ಆತುರವಹಿಸುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಈ ಕಾಲದಲ್ಲಿ ಶಾಲೆ ಆರಂಭಿಸುವ ಅವಸರ ಯಾಕೆ ಎಂದು ಸುರೇಶ್ ಕುಮಾರ್ ಹಾಗೂ ಯಡಿಯೂರಪ್ಪ ಸ್ಪಷ್ಟನೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತೀ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ರಾಜ್ಯ ಸರಕಾರ ಸ್ಪಷ್ಟವಾದ ತೀರ್ಮಾನ ಕೈಗೊಳ್ಳುವುದರ ಬದಲು ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರು.

ಬೇರೆ ದೇಶಗಳಲ್ಲಿ ಬ್ಯಾಚ್ ಪ್ರಕಾರ ಶಾಲೆಗಳನ್ನು ನಡೆಸುವ ಕಾರ್ಯ ಆರಂಭವಾಗಿದೆ. ತರಗತಿಗಳಲ್ಲಿ ಮಕ್ಕಳ ಸಂಖ್ಯೆ ಶೇ. 30ಕ್ಕಿಂತಲೂ ಕಡಿಮೆ ಇದೆ. ಆದರೂ ಮಕ್ಕಳಿಗೆ ಸೋಂಕು ತಗುಲಿದೆ. ಕೋವಿಡ್ ಸೋಂಕಿಗೆ ಅತೀ ಹೆಚ್ಚು ಬಲಿಯಾಗುವವರು 1-10ರ ಒಳಗಿನ ಹಾಗೂ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಈ ಮಧ್ಯೆ ಇಷ್ಟು ತರಾತುರಿಯಲ್ಲಿ ಶಾಲೆ ಆರಂಭಿಸುವ ಅವಸರ ಯಾಕೆ?. ಶಿಕ್ಷಣ ಸಚಿವರು, ಸಿಎಂ ಅವರು ಖಾಸಗಿ ಶಾಲೆಗಳನ್ನು ನೋಡಿ ಶಾಲಾ ಮಕ್ಕಳ ಭವಿಷ್ಯ ನಿರ್ಧಾರ ಮಾಡಲು ಹೋಗಿದ್ದಾರೆ. ಸರಕಾರಿ ಶಾಲೆಗಳ ಗುಣಮಟ್ಟ ನೋಡಿ ತೀರ್ಮಾನ ಕೈಗೊಂಡಿಲ್ಲ. ಅಲ್ಲದೆ ಮಳೆ ಆರಂಭವಾದಾಗ ಮಕ್ಕಳಿಗೆ ಶೀತ, ಜ್ವರ ಸಾಮಾನ್ಯ. ಆಗ ಮಕ್ಕಳನ್ನು ಯಾವ ಆಸ್ಪತ್ರೆಗೆ ಕಳಿಸೋದು ಈ ಬಗ್ಗೆ ರಾಜ್ಯ ಸರಕಾರ ಆಲೋಚನೆ ಮಾಡಿಲ್ಲ‌. ಒಂದು ಮಗುವಿಗೆ ಸೋಂಕು ತಗುಲಿದರೂ ಆ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುತ್ತಾರಾ?. ಹಾಗಾಗಿ ಪ್ರೈಮರಿ ಶಾಲೆಯನ್ನು ಆರಂಭಿಸುತ್ತಿಲ್ಲ ಎಂದು ಸರಕಾರ ಈ ಕೂಡಲೇ ಪ್ರಕಟಣೆ ಮಾಡಲಿ ಎಂದು ಐವನ್ ಡಿಸೋಜ ಆಗ್ರಹಿಸಿದರು.

Comments