ಕೊರೊನಾ ಸೋಂಕು ನಿವಾರಣೆಗಾಗಿ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಧನ್ವಂತರಿ ಯಾಗ

ಮಂಗಳೂರು; ಜಗತ್ತನ್ನೇ ಸಂಕಷ್ಟಕ್ಕೆ ತಳ್ಳಿರುವ ಕೊರೊನಾ ವೈರಸ್ ನಿವಾರಣೆಗಾಗಿ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಧನ್ವಂತರಿ ಯಾಗ ನಡೆಯಿತು.

ಎರಡು ತಿಂಗಳ ಬಳಿಕ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಇಂದಿನಿಂದ ದೇವಾಲಯಗಳು ಭಕ್ತರ ಪ್ರವೇಶಕ್ಕೆ ತೆರೆದಿರುವ  ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿಯೂ ಭಕ್ತರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ಕೈಬಿಡಲಾಗಿದೆ.  ಬೆಳಗ್ಗೆಯೇ ಭಕ್ತರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರ ದರ್ಶನ ಪಡೆದರು. ಬೆಳಗ್ಗೆ 8.30 ಸುಮಾರಿಗೆ ಕೊರೊನಾ ಸೋಂಕು ಮುಕ್ತಿಗಾಗಿ ಧನ್ವಂತರಿ ಯಾಗ ನಡೆದರೆ 11.30 ಕ್ಕೆ ಶ್ರೀ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಿತು. ದೇವಾಲಯ ಪ್ರವೇಶಿಸುವ ಸಂದರ್ಭ ಭಕ್ತರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಾಲಯದ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿಯೇ ದೇವಾಲಯ ಪ್ರವೇಶಿಸಬೇಕು. ದೇವಸ್ಥಾನದ ದ್ವಾರದ ಬಳಿಯೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಕೈಶುಚಿಗೊಳಿಸಿಯೇ ದೇವಾಲಯ ಪ್ರವೇಶಿಸಬೇಕು ಎಂದು ನಿಯಮಗಳನ್ನು ಮಾಡಲಾಗಿದೆ.

Comments