ಹೋಂ‌ಕ್ವಾರಂಟೈನ್ ವ್ಯವಸ್ಥೆಯಿಂದ ಗ್ರಾಮಗ್ರಾಮಗಳ ನಡುವೆ ವೈಮನಸ್ಸು ಸಾಧ್ಯತೆ;ಖಾದರ್


ಮಂಗಳೂರು: ಹೊರ ರಾಜ್ಯದಿಂದ ಬಂದವರಿಗೆ ಸರ್ಕಾರಿ ಕ್ವಾರೆಂಟೈನ್ ಬದಲು ಹೋಂ ಕ್ವಾರೆಂಟೈನ್ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡುತ್ತಿದೆ. ಇದರಿಂದ ಗ್ರಾಮಗ್ರಾಮಗಳ ನಡುವೆ ವೈಮನಸ್ಸು ಉಂಟಾಗಲಿದೆ‌. ಪರಸ್ಪರ ನೆರೆಮನೆಯಲ್ಲಿ ಸಮಸ್ಯೆ ಆಗಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು‌.

ಒಬ್ಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ‌ಮಹಾರಾಷ್ಟ್ರದವರು ರಾಜ್ಯಕ್ಕೆ ಬರೋದು ಬೇಡ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರಕಾರ ಕ್ವಾರೆಂಟೈನ್ ಇಲ್ಲದೆ, ತಪಾಸಣೆ ಇಲ್ಲದೆ ಮನೆಗೆ ಕಳುಹಿಸುತ್ತಿದೆ‌. ಇವರ ನಿರ್ಧಾರ ಸ್ಪಷ್ಟವಾಗುತ್ತಿಲ್ಲ. ಆದ್ದರಿಂದ ನನ್ನ ಕ್ಷೇತ್ರದಲ್ಲಿ ಯಾವ ರಾಜ್ಯದಿಂದ ಬಂದರೂ ಕ್ವಾರೆಂಟೈನ್ ಕಡ್ಡಾಯಗೊಳಿಸಲಾಗಿದೆ‌. ಬೆಳ್ಮ ಗ್ರಾಪಂ ನೋಡಲ್ ಕಚೇರಿಯಾಗಿ ಮಾಡಲಾಗಿದ್ದು, 

ಹೊರರಾಜ್ಯದಿಂದ ಊರಿಗೆ ಬಂದಾಗ ಗೊಂದಲ, ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ‌. ಈಗ ಇವರ ಕ್ವಾರೆಂಟೈನ್ ಟ್ರೈನ್ ಎಲ್ಲಿಗೆ ಹೋಯಿತು? ರ್ಯಾಪಿಡ್ ಟೆಸ್ಟ್ ಕಿಟ್ ಎಲ್ಲಿಗೆ ಹೋಯ್ತು? ಏನಾಯ್ತು? ಎಂದು ಪ್ರಶ್ನಿಸಿದರು.

ಜಿಲ್ಲಾಡಳಿತ ಟೆಸ್ಟ್ ಮಾಡಿಸದೆ ಮನೆಗೆ ಕಳಿಸೋದು ತಪ್ಪು. ಬಳಿಕ ಎಮರ್ಜೆನ್ಸಿ ಆಗಿ ಸಾವಾದ್ರೆ ಏನು ಮಾಡೋದು. ಪಾಸಿಟಿವ್ ಬಂದ್ರೆ ಸಮಸ್ಯೆ ಇಲ್ಲ. ಕ್ವಾರೆಂಟೈನ್ ನಲ್ಲಿ ಇರಿಸಿ ಗುಣಮುಖ ಮಾಡಬಹುದು. ಆದರೆ ಟೆಸ್ಟ್ ಮಾಡ್ಲಿಕ್ಕೆ ಏನು ಸಮಸ್ಯೆ. ಆದ್ದರಿಂದ ಮಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಸರ್ಕಾರಿ ಕ್ವಾರೆಂಟೈನ್ ಮಾಡಲಿ, ತಪಾಸಣೆ ಕಡ್ಡಾಯಗೊಳಿಸಲಿ. ಇದು ಮನೆಯವರಿಗೂ ಒಳ್ಳೆಯದು, ಊರಿನವರಿಗೂ ಒಳ್ಳೆಯದು ಎಂದು ಖಾದರ್ ಹೇಳಿದರು.

Comments