ಬೀದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ತೀರ್ಮಾನ ಪಾಲಿಕೆಯ ಹೃದಯ ಹೀನ ಕ್ರತ್ಯ, ಹೋರಾಟ ಅನಿವಾರ್ಯ - ಬಿ.ಕೆ ಇಮ್ತಿಯಾಝ್


ಮಂಗಳೂರು : ಸಂಚಾರ ಮತ್ತು ಫುಟ್ ಪಾತ್ ಆಕ್ರಮಣದ ಹೆಸರಿನಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ನಡೆಸುವ ಬಗ್ಗೆ ಮೇಯರ್ ಹೇಳಿಕೆಯನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಮತ್ತು ಮಹಾ ನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಬಿ.ಕೆ ಇಮ್ತಿಯಾಝ್ ತೀವ್ರವಾಗಿ ಖಂಡಿಸಿದ್ದಾರೆ. 
ನಗರದಲ್ಲಿ ಅನೇಕ ಕಡೆ ಬಿಲ್ಡರುಗಳು ರಸ್ತೆ ಮತ್ತು ಪಾರ್ಕಿಂಗ್ ಜಾಗವನ್ನು ಆಕ್ರಮಿಸಿ ಕಟ್ಟಡ ನಿರ್ಮಿಸಿರುವ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಡಪಾಯಿ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸ. 

ಈಗಾಗಲೇ ಲಾಕ್ ಡೌನ್ ಸಮಯದಲ್ಲಿ ದುಡಿಮೆಯಿಲ್ಲದೆ ಕಂಗಾಲಾಗಿದ್ದ ಬೀದಿ ವ್ಯಾಪಾರಿಗಳಿಗೆ ಟೈಗರ್ ಕಾರ್ಯಾಚರಣೆ ಮಾಡಲು ತೀರ್ಮಾನಿಸಿರುವುದು ಅಮಾನವೀಯ ವರ್ತನೆ ಆಗಿದೆ. ಲಾಕ್ ಡೌನ್ ಕಾಲದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ  ಒಂದು ಕಿಲೋ ಅಕ್ಕಿಯನ್ನು ವಿತರಿಸಲು ಯೋಗ್ಯತೆ ಇಲ್ಲದ ಮನಪಾ ಆಡಳಿತ ಅವರ ಮೇಲೆ ದಬ್ಬಾಳಿಕೆ ನಡೆಸಲು  ಮುಂದಾಗಿರುವುದು ನಗರಾಡಳಿತ ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂಬುವುದು ಸಾಬೀತಾಗುತ್ತಿದೆ. 
ಕೇಂದ್ರ ಮಾರುಕಟ್ಟೆ ಸ್ಥಳಾಂತರ ಮತ್ತು ಪರ್ಯಾಯ ಮಾರುಕಟ್ಟೆಗಾಗಿ ಬೀದಿಬದಿ ವ್ಯಾಪಾರ ವಲಯದ ಜಾಗವನ್ನು ಕೊಟ್ಟಿದ್ದು ಮಾತ್ರವಲ್ಲದೆ ಬೀದಿ ವ್ಯಾಪಾರ ನಡೆಯುತ್ತಿದ್ದ ಲೇಡಿಗೋಷನ್ ಮತ್ತು ಕೇಂದ್ರ ಮಾರುಕಟ್ಟೆಯ ಸುತ್ತಮುತ್ತ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. 

ಕೋವಿಡ್ ನಿಂದಾಗಿ ಜಗತ್ತೇ ಸಂಕಷ್ಟದಲ್ಲಿರುವಾಗ ಲಾಕ್ ಡೌನ್ ಸಡಿಲಿಕೆಯ ಸಂಧರ್ಭದಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟು ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದ್ದ ಪಾಲಿಕೆ ಆಡಳಿತ ಹೃದಯ ಹೀನತೆಯಿಂದ ಬಳಲುತ್ತಿರುವುದು ನಗರದ ದುರಾದೃಷ್ಟ. 

ಜೂನ್ 8ರ  ನಂತರ ಪೂರ್ಣ ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ ಬೀಡಬೇಕು.  ಪಾಲಿಕೆ ಅಧಿಕಾರಿಗಳು ವ್ಯಾಪಾರಕ್ಕೆ ತೊಂದರೆ ನೀಡುವುದನ್ನು ಮುಂದುವರಿಸಿದಲ್ಲಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಆಗಲಿದೆ. 

2011ರಲ್ಲಿ  ಟೈಗರ್ ಕಾರ್ಯಾಚರಣೆಯ ವಿರುದ್ಧದ ಹೋರಾಟವನ್ನು ಮೇಯರ್ ಮತ್ತು ಮನಪಾ ಆಡಳಿತಗಾರರಿಗೆ  ಈ ಮೂಲಕ ನೆನಪಿಸಲು ಬಯಸುತ್ತೇನೆ ಟೈಗರ್ ಕಾರ್ಯಾಚರಣೆ ಮತ್ತೆ ಆರಂಭಿಸಿದರೆ ತೀವ್ರ ತರವಾದ ಹೋರಾಟವನ್ನು ಎದುರಿಸಬೇಕಾಗಬಹುದು ಎಂದು ಬಿ.ಕೆ ಇಮ್ತಿಯಾಝ್ ಎಚ್ಚರಿಸಿದ್ದಾರೆ. 
ಜೂನ್ 3ರಂದು ನಡೆದ ಪಟ್ಟಣ ವ್ಯಾಪಾರ ಸಮಿತಿ ಸಭೆಯಲ್ಲೂ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಸಮಾನ ಮನಸ್ಕರನ್ನು ಸಂಘಟಿಸಿ ಬೃಹತ್ ಹೋರಾಟವನ್ನು ರೂಪಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments