ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಜೆಡಿಎಸ್ ಆಗ್ರಹ

ಮಂಗಳೂರು : ಸೆಂಟ್ರಲ್ ಮಾರ್ಕೆಟ್ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಮನಪಾ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ವಿಧಿಸಿದ್ದರೂ ಅವರಿಗೆ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಕೊರೋನ ನೆಪವೊಡ್ಡಿ ವ್ಯಾಪಾರ ಮಾಡಲು ಅಡ್ಡಿ ಪಡಿಸಲಾಗಿದೆ. ಪ್ರಸ್ತುತ ಲಾಕ್ ಡೌನ್ ತೆರವಾಗಿರುವ ಹಿನ್ನೆಲೆಯಲ್ಲಿ ಹಾಗೂ ನ್ಯಾಯಾಲಯ ಮನಪಾ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಮತ್ತೆ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಹಿಂದಿನಂತೆ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ವ್ಯಾಪಾರಿಗಳಿಗೆ ಸೂಕ್ತ ಸಮಯಾವಕಾಶವನ್ನು ನೀಡದೆ ಇದ್ದಕ್ಕಿದ್ದಂತೆ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲು ಸೂಚನೆ ನೀಡಲಾಯಿತು. ಕೊರೋನ ಹರಡುವಿಕೆಯ ಸಾಧ್ಯತೆಯನ್ನು ಕಡಿಮೆ ಗೊಳಿಸುವ ದೃಷ್ಟಿಯಿಂದ ಈ ಕ್ರಮ ಕೈ ಗೊಳ್ಳುವುದಾಗಿ ಮನಪಾ ತುರ್ತು ಆದೇಶ ನೀಡಿತು.ಇದರಿಂದ ತೊಂದರೆಗೊಳಗಾದ ವ್ಯಾಪಾರಸ್ಥರಲ್ಲಿ ಕೆಲವರು ಬೈಕಂಪಾಡಿಗೆ ಸ್ಥಳಾಂತರ ಗೊಂಡರೆ, ಇನ್ನು ಕೆಲವರು ಮನೆಯಲ್ಲಿಯೆ ಇರ ಬೇಕಾಯಿತು. ಬೈಕಂಪಾಡಿಯಲ್ಲಿಯೂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸೂಕ್ತ ಮೂಲ ಸೌಕರ್ಯಗಳಿಲ್ಲದೆ ಇದ್ದ ಕಾರಣ ಅಲ್ಲಿಯೂ ಮನಪಾ ಅಧಿಕಾರಿಗಳ ಈ ಕ್ರಮದಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. ಈ ಬಗ್ಗೆ ನ್ಯಾಯಾಲಯ ಮನಪಾ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅವಕಾಶ ಮಾಡದೆ ತಡೆಯೊಡ್ಡಿದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ.ಈ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ಆರಂಭಿಸಲು ಹೊರಟಿರುವ ವ್ಯಾಪಾರಸ್ಥರಿಗೆ ಜೆಡಿಎಸ್ ಬೆಂಬಲ ನೀಡುತ್ತದೆ ಈ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಮುಹಮ್ಮದ್ ಕುಂಞ ತಿಳಿಸಿದ್ದಾರೆ.

ಕೊರೋನ ಸಂದರ್ಭದ ಕಿಟ್ ವಿತರಣೆ ಸಮರ್ಪಕವಾಗಿ ನಡೆದಿಲ್ಲ.ಮನಪಾ ಸದಸ್ಯರ ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಕಿಟ್‌ಗಳನ್ನು ಹಂಚಿರುವುದಿಲ್ಲ.ಟೆಂಡರ್ ಕರೆಯದೆ ಸಾಮಾಗ್ರಿಗಳನ್ನು ಖರೀದಿಸಿ ವಿತರಿಸಲಾಗಿದೆ. ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಈ ಆರೋಪವಿದೆ.ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ಬರಬೇಕು. ಅದೇ ರೀತಿ ಮುಜರಾಯಿ ಇಲಾಖೆಯಿಂದ ವಿತರಿಸಲಾದ ಆಹಾರ ಸಾಮಾಗ್ರಿಗಳ ಕಿಟ್‌ಗಳಿಗೆ ಪಕ್ಷದ ಚಿಹ್ನೆ ಹಾಕಿವಿತರಿಸಲಾಗಿದೆ ಎನ್ನುವ ಬಗ್ಗೆಯೂ ಆರೋಪಗಳಿವೆ ಈ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಜೆಡಿಎಸ್ ಆಗ್ರಹಿಸುವುದಾಗಿ ಮುಹಮ್ಮದ್ ಕುಂಞ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಮಾಜಿ ಮಾನಪ ಸದಸ್ಯ ಅಝೀಜ್ ಕುದ್ರೋಳಿ ,ಅಕ್ಷಿತ್ ಸುವರ್ಣ,ಸುಮತಿ ಹೆಗ್ಡೆ,ರತ್ನಾಕರ ಸುವರ್ಣ,ಹನೀಫ್,ಲತೀಫ್ ವಳಚ್ಚಿಲ್,ಫೈಝಲ್,ಫ್ರಾನ್ಸಿಸ್ ,ಪ್ರವೀಣ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.

Comments