ರೋಗಿಗಳನ್ನು ನಡುಬೀದಿಯಲ್ಲಿ ಬಿಟ್ಟ ಮಂಗಳೂರಿನ ಖಾಸಗಿ ಆಸ್ಪತ್ರೆ


ಮಂಗಳೂರು: ಜಿಲ್ಲಾ ಆಸ್ಪತ್ರೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆದ ನಂತರ ಖಾಸಗಿ ಆಸ್ಪತ್ರೆಯಲ್ಲಿದ್ದ ನಾಲ್ವರು ರೋಗಿಗಳಿಗೆ ಚಿಕಿತ್ಸೆ ನೀಡದೇ ರಸ್ತೆಯಲ್ಲಿ ತಂದು ಬಿಟ್ಟ ಅಮಾನವೀಯ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದಾಗ, ಅಲ್ಲಿದ್ದ ಹಲವರು ಬಿಡುಗಡೆಗೊಂಡು ಮನೆಗೆ ಹೋಗಿದ್ದರು. ತೀವ್ರ ಅನಾರೋಗ್ಯದ ಬಡ ರೋಗಿಗಳು, ನಿರ್ಗತಿಕರನ್ನು ಬೇರೆ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಹಣ ಕೊಡದೆ, ಸರಿಯಾಗಿ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಲಾಕ್‌ಡೌನ್ ಸಂದರ್ಭ ಬೀದಿಗೆ ಬಂದು ದಿಕ್ಕಿಲ್ಲದೆ ಪರದಾಡುತ್ತಿದ್ದರು. 
ಹಾಗೆಯೇ ವೆನ್ಲಾಕ್‌ನಿಂದ ಸ್ಥಳಾಂತರಗೊಂಡು ಮೂರು ತಿಂಗಳ ಕಾಲ ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿದ್ದ ನಾಲ್ಕು ಮಂದಿ ಹಿರಿಯ ನಾಗರಿಕರನ್ನು ಆಸ್ಪತ್ರೆಯ ಸಿಬ್ಬಂದಿ ವಾಹನದಲ್ಲಿ ನಿನ್ನೆ ರಾತ್ರಿ ಕಂಕನಾಡಿಯ ಮಾರುಕಟ್ಟೆ ಬಳಿ ತಂದು ಬಿಟ್ಟು ಹೋಗಿ ಅಮಾನವೀಯತೆ ಮೆರೆದಿದ್ದಾರೆ. ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಎಂಬುವವರನ್ನು ನಡುಬೀದಿಯಲ್ಲಿ ಕೈ ಬಿಡಲಾಗಿದೆ. ಇವರು ಮೂರು ತಿಂಗಳ ಹಿಂದೆ
ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೆನ್ ಲಾಕ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾದ ಹಿನ್ನೆಲೆ ಅಲ್ಲಿನ ರೋಗಿಗಳನ್ನು ಬೇರೆ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿತ್ತು. ಹಾಗೆಯೇ ಈ ನಾಲ್ವರನ್ನು ಮೂರು ತಿಂಗಳ ಹಿಂದೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಿತ್ತು. ಅಲ್ಲಿ ಮೂರು ತಿಂಗಳಿಗೂ ಅಧಿಕ ಸಮಯ ಕನಚೂರು ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇವ್ರೆಲ್ಲಾ ಹೃದಯ ಖಾಯಿಲೆ, ಕಾಲು ನೋವು ಮತ್ತು ಇತರೆ ಖಾಯಿಲೆಯಿಂದ ಬಳಲುತ್ತಿದ್ದರು. ಆದ ಉಚಿತ ಚಿಕಿತ್ಸೆ ನೀಡಲಾಗದೇ ವೃದ್ದ ರೋಗಿಗಳನ್ನು ಆಸ್ಪತ್ರೆ ಬೀದಿಗೆ ಬಿಟ್ಟಿದೆ. ಹೀಗಾಗಿ ಈ ಹಿರಿಯ ಜೀವಗಳು ಮಳೆ, ಚಳಿಯಲ್ಲಿ ಮಾರುಕಟ್ಟೆ ಜಗಲಿಯಲ್ಲಿ ನರಳುವಂತಾಗಿದೆ. ಇದನ್ನು ಕಂಡ ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಅವರಿಗೆ ಊಟ, ನೀರು ತಂದು ಕೊಟ್ಟಿದ್ದಾರೆ. ಜೊತೆಗೆ ಬೆಡ್‌ಶೀಟ್, ಹೊದಿಕೆ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

Comments