ಮಂಗಳೂರಿನಲ್ಲಿ ಮಕ್ಕಳು, ಗರ್ಭಿಣಿಯರ ಸಹಿತ 30 ಮಂದಿಗೆ ಕೊರೊನಾ ದೃಢ



ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  30 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಸೌದಿ ಅರೇಬಿಯಾದಿಂದ ಬಂದ 25 ಮಂದಿ ಮತ್ತು ಮಹಾರಾಷ್ಟ್ರದಿಂದ ಬಂದ ಐವರಲ್ಲಿ ಸೋಂಕು ಪತ್ತೆಯಾಗಿದೆ. ಇದುವರೆಗೆ ಮಹಾರಾಷ್ಟ್ರ ದಿಂದ ಬಂದವರಲ್ಲಿ ಪಾಸಿಟಿವ್ ಕಂಡುಬರುತ್ತಿದ್ದು, ಇದೀಗ ಸೌದಿ ಅರೇಬಿಯಾದಿಂದ ಬಂದವರಲ್ಲೂ ಸೋಂಕು ಪತ್ತೆಯಾಗುತ್ತಿದೆ. ಕಳೆದ ಒಂದು ವಾರದ ಅಂತರದಲ್ಲಿ 300ಕ್ಕೂ ಅಧಿಕ ಮಂದಿ ಸೌದಿ ಅರೇಬಿಯಾದಿಂದ ಬಾಡಿಗೆ ವಿಮಾನದ ಮೂಲಕ ಕರಾವಳಿಗೆ ಬಂದಿದ್ದಾರೆ. ಬಂದವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ.

ಶನಿವಾರ ಸೋಂಕು ಪತ್ತೆಯಾದವರ ಪೈಕಿ ಒಂದು ವರ್ಷದ ಮೂರು ಮಕ್ಕಳು, ಎರಡು ವರ್ಷದ ಇಬ್ಬರು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐದು ವರ್ಷದ ಕೆಳಗಿನ ಒಟ್ಟು ಏಳು ಮಕ್ಕಳು, ಎಂಟರಿಂದ 14 ವರ್ಷದೊಳಗಿನ ಮೂರು ಮಕ್ಕಳು ಮತ್ತು ಆರು ಮಂದಿ ಗರ್ಭಿಣಿಯರು ಸೇರಿದ್ದಾರೆ. ಪುಟ್ಟ ಮಕ್ಕಳಲ್ಲಿ ಕೊರೋನ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶನಿವಾರ ಬಂದ ಒಟ್ಟು 196 ವರದಿಗಳ ಪೈಕಿ 30 ಪಾಸಿಟಿವ್ ಹಾಗೂ 166 ನೆಗೆಟಿವ್ ಆಗಿದೆ. ಶನಿವಾರ ಮತ್ತೆ 258 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Comments