ಕಾಸರಗೋಡು ಮಂಗಳೂರು ಪಾಸ್ ವಿತರಣೆ ಗೊಂದಲ. ತಲಪಾಡಿ ಗಡಿಯಲ್ಲೆ 3 ಹೆಲ್ಪ್ ಡೆಸ್ಕ್ ತೆರೆಯಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಆದೇಶ.


ಮಂಗಳೂರು;ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಸಂಪರ್ಕದ ಕೊಂಡಿಯಂತಿರುವ ತಲಪಾಡಿ ಗಡಿಯಲ್ಲಿ ಪಾಸ್ ವಿತರಣೆಯಲ್ಲಿ ಆಗಿರುವ ಗೊಂದಲದಿಂದ 2 ಜಿಲ್ಲೆಯ ನಡುವೆ ನಿತ್ಯ ಓಡಾಡುವವರಿಗೆ ಸಮರ್ಪಕ ಪಾಸ್ ವಿತರಣೆ ಆಗದೆ ಗೊಂದಲ ಏರ್ಪಟ್ಟಿತ್ತು. ಕಾಸರಗೋಡು ಕಡೆಯಿಂದ  ಸುಮಾರು 2000 ಕ್ಕೂ ಹೆಚ್ಚು ಅರ್ಜಿಗಳು ಪಾಸ್ ಗಾಗಿ ಬಂದಿದ್ದು, ನಿನ್ನೆಯ ತನಕ 400 ಪಾಸ್ ಗಳ ವಿತರಣೆಯಾಗಿದೆ. ಉಳಿದ ಅರ್ಜಿಗಳು ಆಧಾರ್ ಕಾರ್ಡ್ ಸಹಿತ ಸಮರ್ಪಕ ದಾಖಲೆಗಳು ಇಲ್ಲವೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಪಾಸ್ ವಿತರಣೆಯನ್ನು ಸ್ಥಗಿತಗೊಳಿಸಿದೆ ಎಂದು ಜಿಲ್ಲಾಧಿಕಾರಿಯವರ ಕಛೇರಿಯ ಮೂಲಗಳು ತಿಳಿಸಿವೆ.

ಈ ನಡುವೆ ಕಾಸರಗೋಡು ಜಿಲ್ಲೆಯ ಜನರ ಬೇಡಿಕೆ ಮತ್ತು ಅಲ್ಲಿಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ. ಶ್ರೀಕಾಂತ್ ನೇತ್ರತ್ವದ ತಂಡ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲು ಅವರಿಗೆ ಮಾಡಿದ ವಿಶೇಷ ಮನವಿ ಅನ್ವಯ, ತಕ್ಷಣ ಕಾರ್ಯ ಪ್ರವೃತ್ತರಾದ ಕೋಟ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ 
ಸೂಚನೆಯೊಂದನ್ನು ನೀಡಿ, ನಿಯಮಗಳ ಸಮಸ್ಯೆಗಳೇನೆ ಇದ್ದರೂ, ದೈನಂದಿನ ಚಟುವಟಿಕೆಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸಮಾಡುವ  ಕಾಸರಗೋಡು ಕನ್ನಡಿಗರಿಗೆ ತುರ್ತು ಪಾಸ್ ನೀಡುವುದಕ್ಕಾಗಿ, ದಿನಾಂಕ 8/6/2020 ರ ಸೋಮವಾರ ಬೆಳಿಗ್ಗೆ 10 ಗಂಟೆ ಒಳಗೆ 3 ಹೆಲ್ಪ್ ‌ಡೆಸ್ಕ್ ಗಳನ್ನು ತಲಪಾಡಿ ‌ಗಡಿಯಲ್ಲೇ ಸ್ಥಾಪಿಸಿ,   ದಕ್ಷಿಣ ಕನ್ನಡ  ಜಿಲ್ಲೆಯ ಪ್ರವೇಶಕ್ಕೆ ಬರುವ ಕಾಸರಗೋಡು ಪ್ರಯಾಣಿಕರಿಗೆ ತಲಪಾಡಿ ಗಡಿಯಲ್ಲೇ ಪಾಸ್ ವಿತರಿಸಲು ಆದೇಶಿಸಿದ್ದಾರೆ. 

ಮತ್ತೆ ಸಮಸ್ಯೆಗಳು ಏನಾದರೂ ಬಂದರೆ ತನ್ನನ್ನು ದೂರವಾಣಿ ಮೂಲಕ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಕಾಸರಗೋಡು ಕನ್ನಡಿಗರಿಗೆ ಕೋಟ  ಮನವಿ ಮಾಡಿದ್ದಾರೆ.

Comments