ದ.ಕ ಜಿಲ್ಲೆಯಲ್ಲಿ ಒಂದು ವರ್ಷದ ಮಗು ಸಹಿತ 29 ಮಂದಿಗೆ ಕೊರೊನಾದ.ಕ. ಜಿಲ್ಲೆಯಲ್ಲಿ   29 ಮಂದಿಗೆ ಕೊರೋನ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆಯಾಗಿದೆ. ಈ ನಡುವೆ 43 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸೋಂಕು ದೃಢಪಟ್ಟವರ ಪೈಕಿ 19 ಮಂದಿ ಸೌದಿ ಅರೇಬಿಯ, ಶಾರ್ಜಾ, ಮಸ್ಕತ್ ಹಾಗೂ ಕತರ್‌ನಿಂದ ಆಗಮಿಸಿದವರು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಆರು ಮಂದಿ ಸಹಿತ ‘ಐಎಲ್‌ಐ’ ಹಾಗೂ ‘ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್’ ಪ್ರಕರಣದಲ್ಲಿ ತಲಾ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ. ಮತ್ತೊಂದು ಹೊರರಾಜ್ಯದಿಂದ ಬಂದ ಪ್ರಕರಣವಾಗಿದೆ. ಈ ಪೈಕಿ 68 ವರ್ಷದ ಮಹಿಳೆಯು ‘ಎಸ್‌ಎಆರ್‌ಐ’ ಪ್ರಕರಣದಲ್ಲಿ ಬುಧವಾರ  ಮೃತಪಟ್ಟಿದ್ದಾರೆ.

ಪಿ-9588ರ ಪ್ರಾಥಮಿಕ ಸಂಪರ್ಕದಲ್ಲಿದ್ದ 48 ವರ್ಷದ ಮಹಿಳೆ, 50 ಹಾಗೂ 35 ವರ್ಷದ ಪುರುಷರು, ಪಿ-9589ರ ಪ್ರಾಥಮಿಕ ಸಂಪರ್ಕವುಳ್ಳ 24, 27 ವರ್ಷದ ಮಹಿಳೆಯರು ಹಾಗೂ 27 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.

ಜೂ.17, 19, 21ರಂದು ಅರೇಬಿಯ, ಶಾರ್ಜಾ, ಮಸ್ಕತ್, ಖತರ್‌ನಿಂದ ಬಂದಿದ್ದ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 11 ಮಂದಿ ಮಹಿಳೆಯರು, ಒಂದು ವರ್ಷದ ಮಗು ಸಹಿತ ಎಂಟು ಪುರುಷರಿದ್ದಾರೆ. ಇವರಲ್ಲಿ ಬಹುತೇಕರು ಯುವಕ-ಯುವತಿಯರೇ ಆಗಿದ್ದಾರೆ.
ಮಂಗಳೂರಿನ ನಿವಾಸಿಯಾದ 35 ವರ್ಷದ ಮಹಿಳೆಯನ್ನು ಐಎಲ್‌ಐ (ಇನ್‌ಫ್ಲೂಯೆಂಜಾ ಲೈಕ್ ಇಲ್‌ನೆಸ್) ಪ್ರಕರಣದಲ್ಲಿ ಸೇರ್ಪಡೆ ಮಾಡಲಾಗಿದೆ.

50 ವರ್ಷದ ಮಹಿಳೆಯನ್ನು ‘ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್’ ಪ್ರಕರಣಕ್ಕೆ ಸೇರಿಸಲಾಗಿದೆ. ಇನ್ನು ಜೂ.21ರಂದು ಮುಂಬೈನಿಂದ ಬಂದಿದ್ದ 24 ವರ್ಷದ ಯುವಕನನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ದೃಢಪಟ್ಟಿತ್ತು. ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಎಸ್‌ಎಆರ್‌ಐ ಪ್ರಕರಣದಲ್ಲಿ 68 ವರ್ಷದ ಉಳ್ಳಾಲದ ಮಹಿಳೆ ಬುಧವಾರ  ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ಗುರುವಾರದ ಸೋಂಕಿತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
 ಸಮಾಧಾನಕರ ಬೆಳವಣಿಗೆಯಲ್ಲಿ ಗುರುವಾರ 12 ವರ್ಷದ ಬಾಲಕ 43 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 344 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

Comments