ಮಂಗಳೂರಲ್ಲಿ ಭಾರತದ ಮೊದಲ ‘ಸರ್ವೆಲೊ ಪಿಎಕ್ಸ್ 2020’ ಸೈಕಲ್ - ಈ ಸೈಕಲ್ ಬೆಲೆ 12 ಲಕ್ಷ ರೂ.!


ಮಂಗಳೂರು:ಮಂಗಳೂರಿಗೆ
 ಕೆನಡಿಯನ್ ಮೂಲದ  ಸರ್ವೆಲೊ ಪಿಎಕ್ಸ್ ಸಿರೀಸ್ ಡ್ಯುರ-ಏಸ್ ಡಿಐ2- 2020 ಸೈಕಲ್ ಬಂದಿದೆ.ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕಂಕನಾಡಿ ಬೈಪಾಸ್ ರಸ್ತೆಯ ತಾಜ್ ಸೈಕಲ್ ಮಳಿಗೆಯಲ್ಲಿ ಈ ನೂತನ ಸೈಕಲ್ ಬಂದಿದ್ದು ಗಮನಸೆಳೆಯುತ್ತಿದೆ.

ಸರ್ವೆಲೊ ಪಿಎಕ್ಸ್ ಸಿರೀಸ್‌ನಲ್ಲೇ ಇದು ಮೇಲ್ಪಂಕ್ತಿಯ ಅತ್ಯಾಧುನಿಕ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದೆ. ನಿರ್ದಿಷ್ಟವಾಗಿ ಟ್ರಯಥ್ಲಾನ್ ಸ್ಪರ್ಧಿಗಳಿಗೆಂದೇ ಈ ಬೈಕ್ ತಯಾರಿಸಲಾಗಿದ್ದು, ಪ್ರಪಂಚದ ಮೂಲೆಮೂಲೆಯಲ್ಲೂ ಈ ಬೈಕ್‌ಗೆ ಅನನ್ಯ ಬೇಡಿಕೆಯಿದೆ.

ಇದು ಹಗುರವಾದ ಮತ್ತು ಬಲಿಷ್ಠವಾದ ಸರ್ವೆಲೊ ಪಿಎಕ್ಸ್ ನೂತನ ಸರಣಿಯ ಸೈಕಲ್‌ಆಗಿದೆ. ಸುಧಾರಿತ ‘ಏರೋ’ ಪರೀಕ್ಷೆಯಿಂದ ತಯಾರಿಸಲಾದ ಈ ಯಂತ್ರವು ಸುಧಾರಿತ ಏರೋಡೈನಾಮಿಕ್ಸ್, ಅತ್ಯದ್ಭುತ ಕಾಕ್‌ಪಿಟ್ ಒಳಗೊಂಡಿದೆ. ಈ ಸೈಕಲ್ ಅತ್ಯಾಧುನಿಕ ಶಿಮಾನೊ ಡ್ಯುರಾ ಏಸ್ ಡಿಐ 2 ಸಾಫ್ಟ್‌ವೇರ್‌ನ ಡ್ರೈವ್ ಹೊಂದಿದೆ. ಇಲೆಕ್ಟ್ರಾನಿಕ್ ಗಿಯರ್ ಶಿಫ್ಟರ್‌ನ್ನು ಲ್ಯಾಪ್‌ಟಾಪ್ ಬಳಸಿಕೊಂಡೇ ಫಿಟ್‌ಅಪ್ ಮಾಡಬಹುದು.

ಸಾಮಾನ್ಯವಾಗಿ ಸೈಕಲ್‌ಗಳನ್ನು ಸ್ಟೀಲ್ ಲೋಹದಿಂದಲೇ ಉತ್ಪಾದಿಸಲಾಗುತ್ತದೆ. ಆದರೆ ಈ ಸೈಕಲ್‌ನ್ನು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಈ ಸೈಕಲ್‌ನ್ನು ನಿರ್ದಿಷ್ಟ ರೈಡರ್‌ಗೆ ತಕ್ಕಂತೆ ಸೆಟ್‌ಅಪ್ ಮಾಡಬಹುದು. ಆತನ ಎತ್ತರ, ತೂಕಕ್ಕೆ ಅನುಗುಣವಾಗಿ ಸೆಟ್‌ಅಪ್ ಮಾಡಲಾಗುತ್ತದೆ. ಜತೆಗೆ ಅಗತ್ಯಾನುಸಾರ ಹ್ಯಾಂಡಲ್ ಹಿಂದೆ ಮುಂದೆ ಸರಿಸುವ ಅವಕಾಶವೂ ಇದೆ.

ಆಧುನಿಕ ದಿನಮಾನಗಳಲ್ಲಿ ಹೆಚ್ಚಿನ ಜನತೆ ಫಿಟ್‌ನೆಸ್‌ಗಾಗಿ ಅತ್ಯಾಧುನಿಕ ಸೈಕಲ್‌ಗಳನ್ನು ಖರೀದಿಸುವ ಟ್ರೆಂಡ್ ಬೆಳೆಯುತ್ತಿದೆ. ಯುವ ಜನಾಂಗದ ಸೈಕ್ಲಿಸ್ಟ್‌ಗಳೇ ನೂತನ ಶೈಲಿಯ ಸೈಕಲ್‌ಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಈ ಸೈಕಲ್‌ನ ಮಾರುಕಟ್ಟೆಯ ಬೆಲೆ ಕೇವಲ 12 ಲಕ್ಷ ರೂ ಆಗಿದೆ.

Comments