ಸಯನೈಡ್ ಮೋಹನ್‌ನಿಗೆ 20ನೇ ಹಾಗೂ ಕೊನೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಮಂಗಳೂರು:  ಸಯನೈಡ್ ಮೋಹನ್‌ನಿಗೆ 20ನೇ ಹಾಗೂ ಕೊನೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿ‌ ನ್ಯಾಯಾಲಯ ಆದೇಶಿಸಿದೆ.

ಕೇರಳದ ಕಾಸರಗೋಡಿನ ಕುಂಟಾರು ಗ್ರಾಮದ 25 ವರ್ಷದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸಯನೈಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜೂ. 20ರಂದು ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರಾದ ಸಯೀದುನ್ನಿಸಾ ಘೋಷಿಸಿದರು. ಕೊಲೆ ಅಪರಾಧಕ್ಕಾಗಿ (ಐಪಿಸಿ ಸೆ.302) ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ, ಅಪಹರಣ ಅಪರಾಧಕ್ಕೆ (ಐಪಿಸಿ 366) 10 ವರ್ಷ ಶಿಕ್ಷೆ ಮತ್ತು 5,000 ರೂ. ದಂಡ, ಅತ್ಯಾಚಾರ (ಐಪಿಸಿ 376) ಅಪರಾಧಕ್ಕೆ 7 ವರ್ಷ ಸಜೆ ಮತ್ತು 5000 ರೂ. ದಂಡ, ವಿಷ ಪದಾರ್ಥ (ಸಯನೈಡ್) ಉಣಿಸಿದ (ಐಪಿಸಿ 328) ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 5000 ರೂ. ದಂಡ, ಚಿನ್ನಾಭರಣ ಸುಲಿಗೆ (ಐಪಿಸಿ 392) ಅಪರಾಧಕ್ಕೆ 5 ವರ್ಷ ಕಠಿಣ ಸಜೆ ಮತ್ತು 5000 ರೂ. ದಂಡ, ವಿಷ ಉಣಿಸಿ ಸುಲಿಗೆ ಮಾಡಿದ (ಐಪಿಸಿ 394) ಅಪರಾಧಕ್ಕೆ 10 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ (ಐಪಿಸಿ 417) ಅಪರಾಧಕ್ಕೆ 1 ವರ್ಷ ಶಿಕ್ಷೆ, ಸಾಕ್ಷ್ಯ ನಾಶ (ಐಪಿಸಿ 201) ಅಪರಾಧಕ್ಕೆ 7 ವರ್ಷ ಸಜೆ ಮತ್ತು 5,000 ರೂ. ದಂಡ ಶಿಕ್ಷೆಯನ್ನು ವಿಧಿಸಲಾಗಿದೆ.

 ಕಾಸರಗೋಡಿನ ಕುಂಟಾರಿನ 25 ವರ್ಷ ಪ್ರಾಯದ ಯುವತಿ ಲೇಡಿಸ್ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, 2009ರಲ್ಲಿ ಆಕೆಗೆ ಮೋಹನನ ಪರಿಚಯ ಆಗಿತ್ತು. ತನ್ನನ್ನು ಶಿಕ್ಷಕ ಎಂದು ಪರಿಚಯಿಸಿ ಮದುವೆ ಆಗುವುದಾಗಿ ಭರವಸೆ ನೀಡಿ 3 ಬಾರಿ ಆಕೆಯ ಮನೆಗೆ ಹೋಗಿ ನಂಬಿಸಿದ್ದನು. 2009ರ ಜುಲೈ 8ರಂದು ಯುವತಿ ಸುಳ್ಯದ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಸುಳ್ಯದಿಂದ ಮೋಹನ್ ಬೆಂಗಳೂರಿಗೆ ಕರೆದೊಯ್ದಿದ್ದನು.

3 ದಿನಗಳ ಬಳಿಕ ಮನೆ ಮಂದಿ ಆಕೆಗೆ ಫೋನ್ ಮಾಡಿದಾಗ ಮೋಹನ್ ಕರೆಯನ್ನು ಸ್ವೀಕರಿಸಿ, ಆಕೆ ಸ್ನಾನಕ್ಕೆ ಹೋಗಿದ್ದಾಳೆ, ನಾವು ಮದುವೆ ಆಗಿದ್ದು, ಶೀಘ್ರದಲ್ಲಿಯೇ ಮನೆಗೆ ವಾಪಾಸಾಗುತ್ತೇವೆ ಎಂದು ತಿಳಿಸಿದ್ದನು.

ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಮೋಹನ್ ಜುಲೈ 15ರಂದು ಬೆಳಗ್ಗೆ ಯುವತಿಯನ್ನು ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂದು ಹೇಳಿ ಸೈಯನೈಡ್ ಮಾತ್ರೆ ನೀಡಿದ್ದನು. ಅದನ್ನು ಸೇವಿಸಿದ ಆಕೆ ಶೌಚಾಲಯದ ಬಾಗಿಲಿನ ಬಳಿ ಕುಸಿದು ಬಿದ್ದಿದ್ದು, ಅಷ್ಟರಲ್ಲಿ ಮೋಹನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕುಸಿದು ಬಿದಿದ್ದ ಯುವತಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ರಾಮಕೃಷ್ಣ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಳು.

2009ರ ಅಕ್ಟೋಬರ್‌ನಲ್ಲಿ ಮೋಹನ್ ಬಂಧಿತನಾದ ಸಂದರ್ಭದಲ್ಲಿ ಯುವತಿಯ ತಂಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಮೃತ ಯುವತಿಯ ‘ವಿಸ್ರಾ’ ಪರೀಕ್ಷೆಯಲ್ಲಿ ಸಯನೈಡ್ ಅಂಶ ಇರುವುದು ದೃಢೀಕರಣಗೊಂಡಿತ್ತು. 46 ಸಾಕ್ಷಿಗಳ ವಿಚಾರಣೆ, 89 ದಾಖಲಾತಿಗಳನ್ನು ಹಾಗೂ 31 ಸೊತ್ತುಗಳನ್ನು ಹಾಜರು ಪಡಿಸಲಾಗಿತ್ತು.

ಯುವತಿಯಿಂದ ಸುಲಿಗೆ ಮಾಡಿದ್ದ ಚಿನ್ನಾಭರಣಗಳ ಪೈಕಿ ಒಂದು ಪೆಂಡೆಂಟ್ ಮೋಹನನ 2ನೇ ಪತ್ನಿಯ ಮನೆಯಿಂದ ವಶ ಪಡಿಸಿದ್ದು, ಅದನ್ನು ಕುಂಟಾರಿನ ಯುವತಿಯ ತಾಯಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ಅವರು ವಾದಿಸಿದ್ದರು. ಮೋಹನ್ ಕುಮಾರ್ ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದು, ಅಲ್ಲಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿತ್ತು.

Comments