ಲಾಕ್ ಡೌನ್ ನಿಂದ ಜನರಿಗೆ ಸಂಕಷ್ಟ- ಜೂ. 16 ಕ್ಕೆ ಸಿಪಿಎಂ ಪ್ರತಿಭಟನೆಮಂಗಳೂರು;ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರಿಗೆ ಉಂಟಾಗಿರುವ ಸಂಕಷ್ಟಗಳನ್ನು ಪರಿಹರಿಸಲು ಕ್ರಮ ಜರುಗಿಸಲು ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿಪಿಎಂನಿಂದ ಜೂ.16ರಂದು ಧರಣಿ ಆಯೋಜಿಸಲಾಗಿದೆ.

ದ.ಕ. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ್ತು ಮಂಗಳೂರು ತಾಲೂಕಿನ ವಲಯ ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಲಾಕ್‌ಡೌನ್ ಸಂದರ್ಭ ಜಿಲ್ಲೆಯ ಸಂಸದರು ಹಾಗೂ ಶಾಸಕರು ಸರ್ವಾಧಿಕಾರಿಯಾಗಿ ವರ್ತಿಸಿದ್ದು, ಜಿಲ್ಲಾಡಳಿತವನ್ನು ಕಡೆಗಣಿಸಿದೆ. ಇದರಿಂದಾಗಿ ಕಾರ್ಮಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಎಂದು ವಸಂತ ಆಚಾರಿ ದೂರಿದ್ದಾರೆ.

ಕೇಂದ್ರ ಸರಕಾರ ಪೂರ್ವ ತಯಾರಿ ಇಲ್ಲದೆ ಲಾಕ್‌ಡೌನ್ ಘೋಷಿಸಿರುವುದರಿಂದ ವಲಸೆ ಕಾರ್ಮಿಕರು ಆದಾಯವಿಲ್ಲದೆ ಬೀದಿಪಾಲಾಗಿದ್ದಾರೆ. ಭಾರತ ಸರಕಾರ ಕೊರೋನವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಲಾಕ್‌ಡೌನ್‌ನ ದುಷ್ಪರಿಣಾಮಗಳನ್ನು ಎದುರಿಸಲು ಕ್ರಮ ಜರುಗಿಸಿಲ್ಲ. ಬದಲಾಗಿ ಕಾರ್ಮಿಕರು, ನೌಕರರು ಉದ್ಯೋಗ ಕಡಿತ, ವೇತನ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳಿಗೆ ಬಲಿಯಾಗುತ್ತಿದ್ದಾರೆ. ನೊಂದ ಕುಟುಂಬಗಳಿಗೆ ಪರಿಹಾರ ನೀಡಬೇಕಾದ ಕೇಂದ್ರ ಸರಕಾರ ಲಾಕ್‌ಡೌನ್ ಹಿಂದೆಗೆದು ಕೊರೋನ ತಡೆಗಟ್ಟುವ ಜವಾಬ್ದಾರಿಯನ್ನು ರಾಜ್ಯ ಸರಕಾರಕ್ಕೆ ಹೊರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇರಳ ರಾಜ್ಯ ವಿಶ್ವಕ್ಕೆ ಮಾದರಿಯಾಗಿದೆ. ಯೋಜನಾಬದ್ಧವಾಗಿ ಅಲ್ಲಿನ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೇಂದ್ರ ಸರಕಾರ ಇದನ್ನು ಪರಿಗಣಿಸುತ್ತಿಲ್ಲ. ಆ ಕಾರಣ ಕೊರೋನ ನಿಯಂತ್ರಣದಲ್ಲಿ ಕೇಂದ್ರದ ವೈಫಲ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾಕ್‌ಡೌನ್‌ನ ಎಲ್ಲನಿಯಮಗಳನ್ನು ಪಾಲಿಸಿಕೊಂಡು ಧರಣಿ ನಡೆಸಲಾಗುವುದು ಎಂದರು.

Comments