ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯಿಸಿ ಮೆಸ್ಕಾಂ ವ್ಯವಸ್ಥಾಪಕರಿಗೆ ಮನವಿ


ಮಂಗಳೂರು ; ಕೊರೋನಾ ಸಂಕಷ್ಟದ ಲಾಕ್ಡೌನ್ ಅವಧಿಯು ಜನಸಾಮಾನ್ಯರನ್ನೆಲ್ಲಾ ಕಷ್ಟದ ಕೂಪಕ್ಕೆ ತಳ್ಳಿದೆ. ತಮ್ಮ ದೈನಂದಿನ ಖರ್ಚಿಗಾಗಿ ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಒಂದೊತ್ತಿನ ಊಟಕ್ಕಾಗಿ ಕೈಚಾಚುವ ಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂಕಷ್ಟದ ಈ ಸಂದರ್ಭದಲ್ಲಿ ಲಾಕ್ ಡೌನ್ ಅವಧಿಯ ಮೂರು ತಿಂಗಳುಗಳ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಡಿವೈಎಫ್ಐ ಮಂಗಳೂರು ನಗರ ಸಮಿತಿ ಇಂದು ಬಿಜೈನ ಮೆಸ್ಕಾಂ ಕಚೇರಿಯಲ್ಲಿ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.


ಈ ಕೋರೋನಾ ಕಷ್ಟ ಕಾಲದಲ್ಲಿ ಮೆಸ್ಕಾಂ‌‌ ಸಂಸ್ಥೆ ಜನಸಾಮಾನ್ಯರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಜೀವನ ನಡೆಸುವ ಹೋರಾಟದಲ್ಲಿರುವ ಜನರ ಜೊತೆ ನಿಲ್ಲಬೇಕಾಗಿದೆ. ಮೆಸ್ಕಾಂ ಈವರೆಗೆ ಜಿಲ್ಲೆಯಲ್ಲಿ ಲಾಭದಾಯಕವಾಗಿ ಮುನ್ನಡೆದಿದೆ. ವಿದ್ಯುತ್ ಅನ್ನೋದು ಸೇವಾಕ್ಷೇತ್ರ ಈ ಸಂದರ್ಭದಲ್ಲಾದರೂ ಮೆಸ್ಕಾಂ ಸೇವಾ ಮನೋಭಾವನೆಯಿಂದ ವರ್ತಿಸಬೇಕಾಗಿದೆ. ಮೆಸ್ಕಾಂ ಸಂಸ್ಥೆಯು ಜನಸಾಮಾನ್ಯರ ಮೂರು ತಿಂಗಳ ವಿದ್ಯುತ್ ದರ ಮನ್ನಾ ಮಾಡಬೇಕು ಹಾಗೂ ಆರು ತಿಂಗಳವರೆಗೆ ಬಿಲ್ಲು ಪಾವತಿಸಲು ಬಲವಂತ ಪಡಿಸದೆ, ಸಮಯಾವಕಾಶ ನೀಡಬೇಕೆಂದು ಡಿವೈಎಫ್ಐ ಮಂಗಳೂರು ನಗರ ಸಮಿತಿಯ ಪರವಾಗಿ ಒತ್ತಾಯಿಸಲಾಯಿತು. ನಿಯೋಗದಲ್ಲಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ಅಧ್ಯಕ್ಷ ನವೀನ್ ಕೊಂಚಾಡಿ , ಪ್ರಶಾಂತ್ ಎಂ.ಬಿ, ನಾಗೇಂದ್ರ, ರಘವೀರ್, ಮಾದುರಿ ಬೋಳಾರ ಮುಂತಾದವರು ಉಪಸ್ಥಿತರಿದ್ದರು.

Comments