ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ


ರಾಮನಗರ, :- ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕೆಲಸಗಳಲ್ಲಿ ಕೆರೆ ಮತ್ತು ಕಾಡಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ &ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಅಶ್ವಥ್ ನಾರಾಯಣ ತಿಳಿಸಿದರು.
ಅವರು ಇಂದು ಮಾಗಡಿ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀದಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ ಕರೆಗಳ ಒತ್ತುವರಿಯನ್ನು ತೆರವುಗೊಳಿಸಿ ಅವುಗಳ ಸುತ್ತ ಬೇಲಿ ನಿರ್ಮಿಸಬೇಕು. ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ, ಕೆರೆಗಳ ಜೀರ್ಣೋದ್ಧಾರ ಮಾಡಿ ಮಳೆ ನೀರು ಮರುಪೂರಣಗೊಳ್ಳುವಂತೆ ಮಾಡಬೇಕು ಎಂದರು.
ನರೇಗಾ ಯೋಜನೆಯಲ್ಲಿ ರಾಮನಗರ ಜಿಲ್ಲೆ ಚಿಕ್ಕ ಜಿಲ್ಲೆಯಾದರು ಎರಡನೇ ಜಿಲ್ಲೆಯಾಗಿರುವುದು ಅಭಿನಂದನಾರ್ಹ ವಿಷಯವಾಗಿದೆ ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಟದ ಮೈದಾನ ನಿರ್ಮಿಸುವಂತೆ ತಿಳಿಸಿದರು.ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ನರೇಗಾ ಯೋಜನೆಯ ಉಳಿಕೆ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗುವುದು ಎಂದರು.
ಕೆರೆಗಳ ಅಭಿವೃದ್ಧಿ: ಮಳೆಗಾಲ ಪ್ರಾರಂಭವಾದ ನಂತರ ಕೆರೆಗಳ ಅಭಿವೃದ್ಧಿ ಕೆಲಸ ಕಷ್ಟವಾಗುತ್ತದೆ. ಜಿಲ್ಲೆಯಲ್ಲಿ 2391 ಕೆರೆಗಳಿದ್ದು, 283 ಕೆರೆಗಳು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಯಲ್ಲಿ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳಲ್ಲಿ ಬೋರ್ ವೆಲ್ ಕೊರಿಸಲು ಅವಕಾಶವಿದ್ದಲ್ಲಿ. ಬೋರ್ ವೆಲ್ ಕೊರಿಸುವಂತೆ ಜಿಲ್ಲಾ ಪಮಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಜೂಮ್ ಆ್ಯಪ್ ಮೂಲಕ ನರೇಗಾ ಯೋಜನೆಯಡಿ ಉತ್ತಮ ಸಾಧನೆ ಮಾಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರೊಂದಿಗೆ ಚರ್ಚಿಸಿ, ಎಲ್ಲಾ ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ಮಾಡಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಎ.ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಉಪಕಾರ್ಯದರ್ಶಿ ಉಮೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments