ಕದ್ರಿ ಕ್ರಿಕೆಟರ್ಸ್ ಕ್ಲಬ್‌ನ ಅಂಗಸಂಸ್ಥೆ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಮಂಗಳೂರು : ನಗರದ ಕದ್ರಿ ಕ್ರಿಕೆಟರ್ಸ್ ಕ್ಲಬ್ (ರಿ) ನ ಅಂಗ ಸಂಸ್ಥೆಯಾದ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ನಗರದ ಮಂಕಿಸ್ಟಾಂಡ್ ಬಳಿ ಬಡ ಕುಟುಂಬವೊಂದಕ್ಕೆ ಸುಮಾರು ರೂ. 2 ಲಕ್ಷ 75 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ "ಆಸರೆ ನಿಲಯ" ಮನೆಯ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಆಸರೆ ಫ್ರೆಂಡ್ಸ್ ನ ಪರವಾಗಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ನೂತನ ಮನೆಯ ಕೀಯನ್ನು ಶ್ರೀಮತಿ ಮೀನಾಕ್ಷಿ ಬಂಗೇರ ಹಾಗೂ ಎ.ಉಮೇಶ್ ದಂಪತಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಸರೆ ಫ್ರೆಂಡ್ಸ್ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಬಡವರ್ಗದ ಜನತೆಗೆ ಆಸರೆಯಾಗಿದೆ. ಇವರ ಈ ಸೇವೆ ಎಲ್ಲರಿಗೂ ಮಾದರಿಯಾಗಲಿ. ಇವರು ಇನ್ನಷ್ಟು ಸಮಾಜಸೇವೆಯಲ್ಲಿ ತೊಡಗುವಂತಾಗಲು ದೇವರು ಇವರಿಗೆ ಶಕ್ತಿ ನೀಡಲಿ ಎಂದು ಹಾರೈಸಿದರು.

ವಿಶೇಷ ಅಥಿತಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರು ಮಾತನಾಡಿ, ಕಳೆದ ಹಲವಾರು ಸಮಯಗಳಿಂದ ಹಲವಾರು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಆಸರೆ ಫ್ರೆಂಡ್ಸ್ ಇಂದು ಒಂದು ಬಡ ಕುಟುಂಬದ ಕಣ್ಣೀರು ಒರೆಸುವ ಬಹುದೊಡ್ಡ ಕೆಲಸ ಮಾಡಿದೆ. ಮಾನವೀಯ ನೆಲೆಯಲ್ಲಿ ಇವರು ಮಾಡಿರುವ ಈ ಸೇವೆ ಪ್ರತಿಯೊಬ್ಬರ ಮನಸ್ಸಿಗೆ ಮುಟ್ಟುವಂತಾಗಲಿ. ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಹಾಗೂ ಆಸರೆ ಫ್ರೆಂಡ್ಸ್ ನ ಈ ನಿರಂತರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಮನಪಾ ಸದಸ್ಯ ಪ್ರೇಮನಂದ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಿರುವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್, ಉದ್ಯಮಿಗಳಾದ ಲಕ್ಷ್ಮೀಶ ಭಂಡಾರಿ, ರತ್ನಾಕರ್ ಜೈನ್  ಚಿತ್ರ ನಿರ್ಮಾಪಕ ಕಿಶೋರ್‍ ಡಿ.ಶೆಟ್ಟಿ, ಪ್ರಮುಖರಾದ ಅಶೋಕ್ ಕುಮಾರ್ ಡಿ.ಕೆ, ದಿನೇಶ್ ದೇವಾಡಿಗ, ಗೋಕುಲ್ ಕದ್ರಿ, ಅಮೃತ,ವಿ,ಕದ್ರಿ ಮುಂತಾದವರು ಅಥಿತಿಗಳಾಗಿದ್ದರು.

ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಅಧ್ಯಕ್ಷ ದೀಪಕ್ ಸಾಲಿಯಾನ್, ಉಪಾಧ್ಯಕ್ಷ ಗೌರವ ಕದ್ರಿ, ಕಾರ್ಯದರ್ಶಿ ಹರೀಶ್ ದೇವಾಡಿಗ, ಜೊತೆ ಕಾರ್ಯದರ್ಶಿ ದೀಪಕ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಧನರಾಜ್ ಎನ್.ಡಿ,  ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಕದ್ರಿ,  ಕಾರ್ಯದರ್ಶಿ ಮಂಜುನಾಥ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಗೌರವ ಅಧ್ಯಕ್ಷ ಮೋಹನ್ ಕೊಪ್ಪಳ ಕದ್ರಿ ಸ್ವಾಗತಿಸಿದರು, ವಿ.ಜೆ. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

Comments