ಪಂಪ್ವೆಲ್`ನಲ್ಲಿ ನೂತನ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ಯಾಬಿನೆಟ್ ಅನುಮೋದನೆ - ಸಂಸದ ನಳಿನ್ಮಂಗಳೂರು;ಮಂಗಳೂರಿನ ಪಂಪ್ವೆಲ್ ಬಳಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಶರವೇಗದಲ್ಲಿ ಅಭಿವೃದ್ಧಿಯೆಡೆಗೆ ಸಾಗುತ್ತಿರುವ ಮಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನ ದಟ್ಟಣೆಯಿಂದ ನಗರ ಪ್ರದೇಶದಲ್ಲಿ ಜನರು ಸಂಕಷ್ಟಕ್ಕೀಡಾಗುವುದರಿಂದ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಿಸುವಂತೆ ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕರ ಬೇಡಿಕೆಯಾಗಿತ್ತು‌. ನಮ್ಮ ಸರಕಾರದ ಅವಧಿಯಲ್ಲಿ ಮಂಗಳೂರಿನ ಬಹುದಿನದ ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದಂತೆ ರಾಜ್ಯ ಸರಕಾರ ಕ್ಯಾಬಿನೆಟ್ ನಲ್ಲಿ ಯೋಜನೆ ಅನುಮೋದನೆ ನೀಡಲಾಗಿದೆ ಎಂದು ಸಂಸದ ನಳಿನ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆವತಿಯಿಂದ ಪಂಪ್ವೆಲ್ ಬಳಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಿದ 7.23 ಎಕ್ರೆ ವಿಸ್ತೀರ್ಣದ ಸ್ಥಳದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸುಮಾರು 445.00 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪಿಪಿಪಿ ಮಾಡೆಲ್`ನಲ್ಲಿ ಕಾಮಗಾರಿ ನಡೆಯಲಿದೆ ಎಂದು ಸಂಸದರು ತಿಳಿಸಿದ್ದಾರೆ.

ಇದರಲ್ಲಿ ಸುಮಾರು 10,00,000 ಚದರ ಅಡಿ ವಿಸ್ತೀರ್ಣದ ಶಾಪಿಂಗ್ ಮಾಲ್,ಕಚೇರಿಗಳು, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಅಡಕವಾಗಿರಲಿದೆ. ಗುತ್ತಿಗೆದಾರ ಈ ಯೋಜನೆ ಪೂರ್ಣಗೊಂಡ ಮೇಲೆ 40 ವರ್ಷಗಳ ಕಾಲ ನಿರ್ವಹಣೆಯ ನಂತರ ಬಸ್ ನಿಲ್ದಾಣವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು. ಯೋಜನೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ.

Comments