ನರ್ಮ್ ಬಸ್ಸುಗಳು ಕಾರ್ಯಾಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ


ಮಂಗಳೂರು:- ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ಸ್‍ಗಳ ಸಂಚಾರವನ್ನು ಮಂಗಳೂರು  ನಗರದಲ್ಲಿ ಆರಂಭಿಸಲು  ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
     ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಯಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಾ  ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದ್ದು,  ಈ ಮೊದಲು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ವೆನ್ಲಾಕ್ ಆಸ್ಪತ್ರೆ ದರದಲ್ಲೇ ಚಿಕಿತ್ಸೆ ದೊರಕಬೇಕು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
    ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ಸ್‍ಗಳ ಬಗ್ಗೆ  ಮಾಹಿತಿ ಪಡೆದು  42 ನರ್ಮ್ ಬಸ್ಸುಗಳು ಕಾರ್ಯಾಚರಣೆ ಪ್ರಾರಂಭಿಸಲಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಮೊದಲು  ಒಂದೊಂದಾಗಿ ಕಾರ್ಯಾಚರಿಸಲಿ ಎಂದು ಸೂಚಿಸಿದರು.
    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 32 ಕೋರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರ ಆರೋಗ್ಯ ಸ್ಥಿತಿ ಉತ್ತಮವಾಗಿದೆ.  ರೋಗಿಗಳು ತಮ್ಮ ತಮ್ಮ ಕುಟುಂಬದೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ ಹಾಗೂ ರೋಗಿಯ ಕೌನ್ಸಿಲರ್‍ಗಳು ಕುಟುಂಬದವರಿಗೆ ರೋಗಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯಾರಿ  ಸಚಿವರಿಗೆ ತಿಳಿಸಿದರು.
      ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾತನಾಡಿ ಮಂಗಳವಾರ 40 ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಪ್ರಾರಂಭವಾಗಿದ್ದು ಎಲ್ಲಾ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ.  ಸ್ಯಾನಿಟೈಸರ್ ಬಸ್ ಕಂಡೆಕ್ಟರ್ ಕೈಯಲ್ಲಿ ನೀಡಲಾಗಿದ್ದು ಪ್ರಾಯಾಣಿಕರು ಬಸ್ಸಿನೊಳಗೆ ಪ್ರವೇಶಿಸುವ ಮೊದಲು ಸ್ಯಾನಿಟೈಸರ್ ಬಳಸುವಂತೆ ಕ್ರಮ ವಹಿಸಲಾಗಿದೆ ಹಾಗೂ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ  ಎಂದರು. ಮಂಗಳೂರುನಿಂದ ಬೆಂಗಳೂರು ಅಥವಾ ಮೈಸೂರು ಬಸ್ಸ್‍ಗಳಲ್ಲಿ ಪ್ರಯಾಣಿಸುವವರಿಗೆ ಟರ್ಮಿನಲ್ ಸ್ಕ್ಯಾನಿಂಗ್,  ಮಾಸ್ಕ್, ಸ್ಯಾನಿಟೈಸರ್ ಮತ್ತು ಪ್ರಯಾಣಿಸುವವರ ಬಗ್ಗೆ ಮಾಹಿತಿ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನೀಡಬೇಕು. ಕರ್ನಾಟಕ ಬಸ್ಸ್‍ನಲ್ಲಿ 29 ಜನ,  ರಾಜಹಂಸ ಬಸ್ಸ್‍ನಲ್ಲಿ 19 ಜನ ಪ್ರಯಾಣಿಸಬಹುದು ಎಂದರು.    
     ಸಭೆಯಲ್ಲಿ ಎ.ಪಿ.ಎಂ.ಸಿ ಅಧಿಕಾರಿಗಳು ಮಾತನಾಡಿ ಮಾರುಕಟ್ಟೆ ಸ್ಥಳಾಂತರಿಸಲಾಗಿದ್ದು  ವ್ಯಾಪಾರ ಪ್ರಾರಂಭ ಮಾಡಿದ್ದಾರೆ, ಅವರಿಗೆ ಬೇಕಾಗಿರುವ ನೀರು, ಲೈಟ್ ಮುಂತಾದ ಎಲ್ಲಾ ಅವಶ್ಯಕತೆಗಳನ್ನು ಒದಗಿಸಲಾಗಿದೆ ಎಂದರು.
    ಸಭೆಯಲ್ಲಿ ಶಾಸಕ ಭರತ್ ವೈ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ, ಎಸ್.ಪಿ. ಲಕ್ಷ್ಮೀಪ್ರಸಾದ್, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗಡೆ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Comments