ಮಡಿಕೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ; ಬೆಳೆಸಾಲ ಪಡೆಯುವ ಬಗ್ಗೆ ರೈತರಿಂದ ಹೆಚ್ಚಿನ ಕರೆಗಳ ಸ್ವೀಕಾರ


    ಮಡಿಕೇರಿ : ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯುವಂತಾಗಲು ಕೃಷಿ ಭೂಮಿ ಯಾವ ಸ್ಥಳದಲ್ಲಿದೆಯೋ, ಅದೇ ಸ್ಥಳದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ವಾಸವಾಗಿರುವುದರ ಜೊತೆಗೆ ಆಧಾರ್ ಗುರುತಿನ ಚೀಟಿ ಹೊಂದಿದ್ದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ಪಡೆಯಬಹುದಾಗಿದೆ ಎಂದು ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಎಚ್.ಡಿ.ರವಿಕುಮಾರ್ ಅವರು ತಿಳಿಸಿದ್ದಾರೆ.  
    ಜಿಲ್ಲಾಡಳಿತ ವತಿಯಿಂದ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಶನಿವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯುವ ಬಗ್ಗೆ ಕೃಷಿಕರಿಂದ ಹಲವು ಕರೆ ಸ್ವೀಕರಿಸಿ ಅವರು ಮಾಹಿತಿ ನೀಡಿದರು. 
      ಸಹಕಾರ ಸಂಘಗಳ ಮೂಲಕ ವಿತರಿಸಲಾಗುವ ಕೃಷಿ ಸಾಲ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅಲ್ಲದೆ ಸರ್ಕಾರದ ನಿಯಮದಂತೆ ವಾಸ ಸ್ಥಳ ಮತ್ತು ಜಮೀನು ಇರುವ ಸ್ಥಳಕ್ಕೆ ಆಧಾರ್‍ನಲ್ಲಿರುವ ದಾಖಲಾತಿ ಒಂದೇ ರೀತಿ ಇದಲ್ಲಿ ಸಾಲ ದೊರೆಯಲಿದೆ ಎಂದು ರವಿಕುಮಾರ್ ಅವರು ಹೇಳಿದರು.
      ವೀರಾಜಪೇಟೆಯಿಂದ ಕರೆ ಮಾಡಿದ್ದ ಉತ್ತಪ್ಪ, ಮೈಸೂರಿನಿಂದ ಕರೆ ಮಾಡಿದ್ದ ಸೀತಮ್ಮ ಮತ್ತು ಬೆಂಗಳೂರಿನಿಂದ ಕರೆ ಮಾಡಿದ್ದ ಗಣಪತಿ ಎಂಬುವವರು ಈ ವಿಚಾರವಾಗಿ ಮಾಹಿತಿ ಪಡೆದರು. 
     ಲೋಹಿತ್ ಕುಮಾರ್ ಎಂಬುವವರು ಕರೆ ಮಾಡಿ ಈ ಸಂದರ್ಭದಲ್ಲಿ ಸೀಬಿಲ್ ರೇಟಿಂಗ್ (ಸಾಲ ಮರುಪಾವತಿ ಸೂಚ್ಯಂಕ) ಅನ್ವಯಿಸುತ್ತದೆಯೇ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು, ಆರ್‍ಬಿಐ ನಿಯಮಾವಳಿಯಂತೆ ಮಾರ್ಚ್ 1 ರಿಂದ ಮೇ 31 ರ ವರೆಗೆ ಸೀಬಿಲ್ ಪರಿಗಣಿಸುವಂತಿಲ್ಲ ಎಂದು ಮಾಹಿತಿ ನೀಡಿದರು. 
    ಇನ್ನುಳಿದಂತೆ ಆಟೋ ಚಾಲಕರಿಗೆ ಸರ್ಕಾರ ಘೋಷಿಸಿರುವ ಸಹಾಯಧನ ಪಡೆಯುವ ಬಗ್ಗೆ ಪುನೀತ ಎಂಬುವವರು ಮಾಹಿತಿ ಪಡೆದರು. ಜೊತೆಗೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತಲುಪಿಸುವ ಬಗ್ಗೆ ಸುಂಟಿಕೊಪ್ಪದ ವಿಜಯ್ ಮಾಚಯ್ಯ ಅವರು ಮಾಹಿತಿ ಕೇಳಿದರು. 
    ಲೀಡ್ ಬ್ಯಂಕ್ ಮುಖ್ಯಸ್ಥರು ಉತ್ತರಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ವಿಚಾರಗಳ ಬಗ್ಗೆ ಗಮನಕ್ಕೆ ತಂದು ಸ್ಪಂದಿಸುವುದಾಗಿ ತಿಳಿಸಿದರು.
    ನೋಡಲ್ ಅಧಿಕಾರಿ ಶ್ರೀನಿವಾಸ್,  ಲೀಡ್ ಬ್ಯಾಂಕ್‍ನ ರಾಮಚಂದ್ರ ನಾಯಕ್, ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮೋಹನ್, ಡಿಸಿಸಿ ಬ್ಯಾಂಕಿನ ಸಾಲ ವಿಭಾಗದ ವ್ಯವಸ್ಥಾಪಕರಾದ ಗಿರೀಶ್ ಇತರರು ಇದ್ದರು.

Comments