ಪ. ಬಂಗಾಳಕ್ಕೆ ಹೋಗಲು ಬಾರದ ರೈಲು; ಮಂಗಳೂರಿನಲ್ಲಿ ಬೀದಿಗೆ ಬಿದ್ದ ವಲಸೆ ಕಾರ್ಮಿಕರು


ಮಂಗಳೂರು; ಪಶ್ಚಿಮ ಬಂಗಾಳಕ್ಕೆ ತೆರಳಲು ರೈಲು ಹೊರಡಲಿದೆ ಎಂದು ನಂಬಿ ನೂರಾರು ವಲಸೆ ಕಾರ್ಮಿಕರು ತಾವಿದ್ದ  ಬಾಡಿಗೆ ರೂಮ್ ಗಳನ್ನು ತೊರೆದು ಬಂದು ರೈಲಿಲ್ಲದೆ  ಅತಂತ್ರರಾಗಿ ರಸ್ತೆಗೆ ಬಿದ್ದಿರುವ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ.


ಮಂಗಳೂರು ಹೊರವಲಯದ ಜೋಕಟ್ಟೆ ಭಾಗದಲ್ಲಿ ಬಹಳಷ್ಟು ಮಂದಿ ಪಶ್ಚಿಮ ಬಂಗಾಳದ ಕಾರ್ಮಿಕರು ನೆಲೆಸಿದ್ದಾರೆ.
ಸೇವಾಸಿಂಧು ಆ್ಯಪ್ ಮೂಲಕ ತಮ್ಮೂರಿಗೆ ತೆರಳಲು ನೋಂದಾಯಿಸಿದ್ದ ಕಾರ್ಮಿಕರಿಗೆ ರೈಲು ಇಂದು ಮಧ್ಯಾಹ್ನ ಹೊರಡಲಿದೆ ಎಂಬ ಸಂದೇಶ ಬಂದಿತ್ತು.
ಹೀಗಾಗಿ ನೂರಾರು ಕಾರ್ಮಿಕರು ಮೂರು ತಿಂಗಳ ಬವಣೆಯ ಬಳಿಕ ಊರಿಗೆ ತೆರಳಲು ತಯಾರಾಗಿದ್ದರು. ತಾವಿದ್ದ
ತಾತ್ಕಾಲಿಕ ಬಾಡಿಗೆ ಕೊಠಡಿಗಳನ್ನು ಬಿಟ್ಟು ತಮ್ಮ ಸಾಮಾನು-ಸರಂಜಾಮುಗಳನ್ನು ತುಂಬಿಕೊಂಡು ಹೊರಟಿದ್ದ ಮಂದಿಗೆ ಅರ್ಧ ದಾರಿಯಲ್ಲಿ ರೈಲು ಕ್ಯಾನ್ಸಲ್ ಆಗಿರುವ ಬಗ್ಗೆ ಸಂದೇಶ ಬಂದಿದೆ.
ಜಿಲ್ಲಾಡಳಿತ ರೈಲು ನಿಲ್ದಾಣಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡುವ ಭರವಸೆಯಿಂದ ಕಾರ್ಮಿಕರು ಜೋಕಟ್ಟೆಯ ಇಂಡಸ್ಟ್ರಿಯಲ್ ಏರಿಯಾದ ರಸ್ತೆ ಮಧ್ಯೆ ಕುಳಿತಿದ್ದರು.
ಕೊನೆಗೆ ಸುರತ್ಕಲ್ ಪೊಲೀಸರು ಮತ್ತು ಸ್ಥಳೀಯರು ಬಂದು ನೊಂದು ನಿಂತಿದ್ದ ಕಾರ್ಮಿಕರನ್ನು ಸಮಾಧಾನ ಪಡಿಸಿದರು.
ಊಟ, ನೀರಿಲ್ಲದೆ ರಸ್ತೆಯಲ್ಲೇ ಬಿಸಿಲಲ್ಲಿ ನಿಂತ ಕಾರ್ಮಿಕರಿಗೆ ಡಿವೈಎಫ್ಐ ಮಾರ್ಗದರ್ಶನ ಜೋಕಟ್ಟೆ ನಾಗರಿಕ ಸಮಿತಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು.

Comments