ಓರ್ವ ಗರ್ಭಿಣಿ ಸೇರಿದಂತೆ ಮೂವರು ಕೋವಿಡ್‍ನಿಂದ ಗುಣಮುಖಬಾಗಲಕೋಟೆ: : ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಓರ್ವ ಗರ್ಭಿಣಿ ಮಹಿಳೆ ಸೇರಿದಂತೆ ಮೂವರು ಕೋವಿಡ್‍ನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಶನಿವಾರ ಸಂಜೆ ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯಲ್ಲಿ ಢಾಣಕಶಿರೂರ ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ ಪಿ-607, 23 ವರ್ಷದ ಯುವಕ ಪಿ-688 ಮತ್ತು 32 ವರ್ಷ ಪುರುಷ ಪಿ-690 ಕೋವಿಡ್‍ನಿಂದ ಗುಣಮುಖರಾದವರು. ಗರ್ಭಿಣಿ ಮಹಿಳೆಯನ್ನು ಸಂಜೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಉಳಿದ ಇಬ್ಬರನ್ನು ಬಾಗಲಕೋಟೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಇಲ್ಲಿವರೆಗೆ ಒಟ್ಟು 77 ಕೋವಿಡ್ ಸೋಂಕಿತರ ಪ್ರಕರಣಗಳ ಪೈಕಿ 42 ಜನ ಗುಣಮುಖರಾಗಿದ್ದಾರೆ. ಢಾಣಕಶಿರೂರ ಗ್ರಾಮದ 23 ವರ್ಷದ ಗರ್ಭಿಣಿ ಪಿ-607 ಢಾಣಕಶಿರೂರ ಗ್ರಾಮದಿಂದ ತವರಿನ ಮನೆಯ ಊರಾದ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಪುರ ಗ್ರಾಮಕ್ಕೆ ತೆರಳಿದಾಗ ಉಸಿರಾಟದ ತೊಂದರೆ (ಸಾರಿ) ಹಿನ್ನಲೆಯಲ್ಲಿ ಮೇ 3 ರಂದು ಕೋವಿಸ್ ಸೋಂಕು ದೃಡಪಟ್ಟಿತ್ತು. ಡಾಣಕಶಿರೂರ ಗ್ರಾಮದ ಮತ್ತಿಬ್ಬರಾದ ಪಿ-688 ಮತ್ತು 690 ವ್ಯಕ್ತಗಳಿಗೆ ಗರ್ಭಿಣಿ ಮಹಿಳೆ ಪಿ-607 ಇವರ ಸಂಪರ್ಕದಿಂದ ಮೇ 6 ರಂದು ಕೋವಿಡ್ ದೃಡಪಟ್ಟಿತ್ತು. ಈಗ ಈ ಮೂವರು ಕೋವಿಡ್‍ದಿಂದ ಸಂಪೂರ್ಣ ಗುಣಮುಖರಾಗಿರುತ್ತಾರೆಂದು ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 91 ಸ್ಯಾಂಪಲ್‍ಗಳ ವರದಿ ಬರಬೇಕಾಗಿದೆ. ಹೊಸದಾಗಿ ಮತ್ತೆ 222 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಇನ್‍ಸ್ಟಿಟ್ಯೂಟ್ ಕ್ವಾಂರಂಟೈನ್‍ನಲ್ಲಿ ಒಟ್ಟು 2415 ಜನರನ್ನು ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 5664 ಜನರ ಸ್ಯಾಂಪಲ್‍ಗಳನ್ನು ಕಳುಹಿಸಲಾಗಿದ್ದು, ಈ ಪೈಕಿ 5244 ನೆಗಟಿವ್ ಪ್ರಕರಣ, 77 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ. ಇಲ್ಲಿಯವರೆಗೆ ಕೋವಿಡ್-19 ದಿಂದ ಶನಿವಾರ 3 ಜನ ಸೇರಿ ಒಟ್ಟು 42 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 34 ಜನ ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಇನ್ನು 7 ಕಂಟೈನ್‍ಮೆಂಟ್ ಝೋನ್‍ಗಳಿವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 305 ಜನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‍ಪೋಸ್ಟಗಳ ಪೈಕಿ 4 ಚೆಕ್ ಪೋಸ್ಟಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‍ಪೋಸ್ಟಗಳ ಮೂಲಕ 53021 ವಾಹನಗಳ ತಪಾಸಣೆ ಹಾಗೂ 2,04,659 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments