ಕೊರೊನಾ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆ*ಕೊರೊನಾ ಮುಕ್ತ ಜಿಲ್ಲೆಗೆ ಎಲ್ಲರ ಸಹಕಾರ ಅಗತ್ಯ*-ಸಚಿವ ಪ್ರಭು ಬಿ.ಚವ್ಹಾಣಯಾದಗಿರಿ; ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳನ್ನು ಪಾಲನೆ ಮಾಡುವ ಮೂಲಕ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸುವುದು ಜಿಲ್ಲೆಯ ಪ್ರತಿಯೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಬೇರೆ ರಾಜ್ಯಗಳಿಂದ ಯಾದಗಿರಿ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಇವರನ್ನು ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರುವ ವಸತಿನಿಲಯ, ಶಾಲೆ ಅಥವಾ ಸಾರ್ವಜನಿಕರ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಬೇಕು. ಆಹಾರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ನೀಡಬೇಕು ಎಂದು ಸೂಚಿಸಿದರು.

ಹೊರ ರಾಜ್ಯಗಳಿಂದ ಬಂದವರನ್ನು ರಾಜ್ಯಗಳವಾರು ವಿಂಗಡಣೆ ಮಾಡಿ ಕ್ವಾರಂಟೈನ್ ಮಾಡಬೇಕು. ಇವರೆಲ್ಲರ ಆರೋಗ್ಯ ತಪಾಸಣೆ ಮತ್ತು ಕೋವಿಡ್-19 ಪರೀಕ್ಷೆ ಕಡ್ಡಾಯ. ಕೋವಿಡ್-19 ಪರೀಕ್ಷೆಯಲ್ಲಿ ಗರ್ಭಿಣಿಯರು, ಬಾಣಂತಿಯರು, 10 ವರ್ಷಕ್ಕಿಂತ ಕೆಳಗಿನವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಿ ಮತ್ತು ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿನ ಎಲ್ಲರಿಗೂ ಮಾಸ್ಕ್ ವಿತರಣೆ ಮಾಡುವ ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ತಿಳಿವಳಿಕೆ ನೀಡಲು ಅವರು ನಿರ್ದೇಶಿಸಿದರು.

ಅಹಮದಾಬಾದ್‍ನಿಂದ ಯಾದಗಿರಿ ಜಿಲ್ಲೆಗೆ ಮರಳಿದ ಇಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸುರಪುರದ ಆಸರ್‍ಮೊಹಲ್ಲಾವನ್ನು ಕಂಟೇನ್ಮೆಂಟ್ ಝೋನ್ ಅನ್ನು ಘೋಷಣೆ ಮಾಡಿದ್ದು, ಮನೆಮನೆ ಸಮೀಕ್ಷೆಗೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಪಿಡಿಒ ಗಳು ತಮ್ಮ ಕಾರ್ಯ ಸ್ಥಾನದಲ್ಲಿರಬೇಕು ಮತ್ತು ಮೊಬೈಲ್ ಸಂಪರ್ಕಕ್ಕೆ ಸಿಗುವಂತಿರಬೇಕು. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಸರ್ಕಾರದ ಕಾರ್ಯದರ್ಶಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.

ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಜನರ ಆರೋಗ್ಯ ಸಮೀಕ್ಷೆ ಮಾಡುವುದು ಒಂದು ಪಾತ್ರವಾದರೆ, ಹೊರ ರಾಜ್ಯಗಳಿಂದ ಬಂದ ಸಾರ್ವಜನಿಕರ ಬಗ್ಗೆ ಕಾಳಜಿವಹಿಸುವುದು ಮತ್ತೊಂದು ಪಾತ್ರವಾಗಿದೆ. ಇವರ ಆರೋಗ್ಯ ತಪಾಸಣೆ ಜೊತೆಗೆ ಆಹಾರ ಮತ್ತು ಮೂಲಸೌಕರ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.

ಶಾಸಕರಾದ ನರಸಿಂಹ ನಾಯಕ (ರಾಜೂಗೌಡ) ಅವರು ಮಾತನಾಡಿ, ಸಾರಿಗೆ ಸಂಸ್ಥೆಗಳಲ್ಲಿ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ 24 ಗಂಟೆಗಳಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳದ ಪಿಡಿಒಗಳನ್ನು ತಕ್ಷಣ ಅಮಾನತು ಮಾಡಬೇಕು. ಇತ್ತೀಚೆಗೆ ವಿದ್ಯುತ್ ಕಡಿತ ಹೆಚ್ಚಾಗುತ್ತಿದ್ದು, ಇದನ್ನು ಸರಿಪಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅಂಶಗಳನ್ನು ವಿವಿಧ ಇಲಾಖೆ ಅಧಿಕಾರಿಗಳು ತಿಳಿದುಕೊಂಡು ಅರ್ಹರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಹಳ್ಳಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಮಾತನಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡಿದಂತೆ ವಾಹನ ಚಾಲಕರು, ಕ್ಷೌರಿಕರು ಸೇರಿದಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಪಟ್ಟಿಯನ್ನು ಇಟ್ಟುಕೊಂಡಿರಬೇಕು. ಹಣ ಬಿಡುಗಡೆಯಾದ ತಕ್ಷಣ ವರ್ಗಾವಣೆ ಮಾಡಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಕೊರೊನಾ ತಡೆಗೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ರಚಿಸಲಾಗಿದೆ. ಬೇರೆ ರಾಜ್ಯಕ್ಕೆ ವಲಸೆ ಹೋಗಿ ಯಾದಗಿರಿ ಜಿಲ್ಲೆಗೆ ವಾಪಸ್ಸಾದ 5,229 ಜನರನ್ನು 65 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಕ್ಯಾಂಪ್‍ಗಳಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ. ಈ ಪೈಕಿ ಮುಂಬೈನಿಂದ 732 ಜನ, ಥಾಣೆಯಿಂದ 578, ಪುಣೆಯಿಂದ 931, ಅಹಮದಾಬಾದ್‍ನಿಂದ 3 ಮತ್ತು ಇತರೆ ರಾಜ್ಯಗಳಿಂದ 2,985 ಜನರು ಬಂದಿದ್ದಾರೆ. ಮುಂಬೈನಿಂದ ಮೇ 11ರಂದು ರೈಲು ಮೂಲಕ 269 ಕಾರ್ಮಿಕರು ಆಗಮಿಸಿದ್ದು, ಇವರನ್ನು ಕೂಡ ಪ್ರತ್ಯೇಕವಾಗಿರಿಸಲಾಗಿದೆ. ಕರ್ನಾಟಕದ ಇತರೆ ಜಿಲ್ಲೆಗಳಿಂದ ಮೇ 10ರವರೆಗೆ 363 ಬಸ್‍ಗಳಲ್ಲಿ ಒಟ್ಟು 10,518 ಕಾರ್ಮಿಕರು ಯಾದಗಿರಿ ಜಿಲ್ಲೆಗೆ ಮರಳಿದ್ದಾರೆ ಎಂದು ತಿಳಿಸಿದರು.

ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗೆ 56 ಜನರನ್ನು ಮತ್ತು ಬೇರೆ ರಾಜ್ಯಗಳಿಗೆ 254 ಜನರನ್ನು ಬಸ್ ಮೂಲಕ ಸರಕ್ಷಿತವಾಗಿ ಕಳುಹಿಸಿಕೊಡಲಾಗಿದೆ. ಬೇರೆ ರಾಜ್ಯಗಳಿಂದ ಆಗಮಿಸಲು 4,425 ಜನ ಮತ್ತು ಬೇರೆ ರಾಜ್ಯಕ್ಕೆ ಹೋಗಲು 1,793 ಜನ ಆನ್‍ಲೈನ್ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ತಂಗಿರುವ ಹೊರ ರಾಜ್ಯಗಳ ಕಾರ್ಮಿಕರಿಗೆ ಜಿಲ್ಲಾಡಳಿತದ ಎಸ್‍ಡಿಆರ್‍ಎಫ್ ನಿಂದ ಉಚಿತವಾಗಿ ಆಹಾರ ಕಿಟ್‍ಗಳನ್ನು ನೀಡಲಾಗಿದೆ. ಒಟ್ಟು 1001 ಕುಟುಂಬಗಳ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, 5 ಕೆ.ಜಿ ಗೋಧಿ ಹಿಟ್ಟು, 2 ಲೀಟರ್ ಅಡುಗೆ ಎಣ್ಣೆ, 2 ಕೆ.ಜಿ ತೊಗರಿ ಬೇಳೆ ನೀಡಲಾಗಿದೆ. ಪಡಿತರ ಚೀಟಿ ಇಲ್ಲದ 5 ಸಾವಿರ ಕುಟುಂಬಗಳ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಕೊಡಲಾಗಿದೆ. ಅಜೀಂ ಪ್ರೇಮ್‍ಜಿ ಸಂಸ್ಥೆಯಿಂದ 5 ಸಾವಿರ ಕುಟುಂಬಗಳ ಪ್ರತಿ ಕುಟುಂಬಕ್ಕೆ 15 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗಿದೆ. ಇನ್ನು ಆಲಿಕಲ್ಲು ಮಳೆಯಿಂದ 2,390 ರೈತರ 3037.22 ಹೆಕ್ಟೇರ್ ಬೆಳೆಹಾನಿಯಾಗಿದ್ದು, ಈ ಪೈಕಿ 1436 ರೈತರಿಗೆ 1.50 ಕೋಟಿ ಪರಿಹಾರ ನೀಡಲಾಗಿದೆ. 979 ರೈತರಿಗೆ ಪರಿಹಾರ ಪಾವತಿ ಬಾಕಿ ಇರುವುದಾಗಿ ವಿವರಿಸಿದರು.

*ಪಿಪಿಇ ಕಿಟ್ ಮತ್ತು ತಜ್ಞರು ಬೇಕು*: ಕೋವಿಡ್-19 ಸಂಬಂಧ 2 ಸಾವಿರ ಪಿಪಿಇ ಕಿಟ್, 5 ಸಾವಿರ ಎನ್-95 ಮಾಸ್ಕ್, 3 ವೆಂಟಿಲೇಟರ್, 20 ಸಾವಿರ ಗ್ಲೌಸ್, 50 ಇನ್‍ಫ್ರಾ ರೆಡ್ ಥೆರೊಮೀಟರ್ ಸಾಮಗ್ರಿಗಳ ಅವಶ್ಯಕತೆ ಇದೆ. ಇದಲ್ಲದೇ, 33 ತಜ್ಞ ವೈದ್ಯರು, 63 ವೈದ್ಯರು, 18 ಶುಶ್ರೂಷಕರು, 16 ಲ್ಯಾಬ್ ತಂತ್ರಜ್ಞರು ಹಾಗೂ 20 ಫಾರ್ಮಾಸಿಸ್ಟ್‍ಗಳ ಅವಶ್ಯಕತೆ ಇರುವುದಾಗಿ ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಕೋವಿಡ್-19 ಆರ್ಟಿಫಿಸಿಯಲ್ ಲ್ಯಾಬ್ ಸ್ಥಾಪನೆಗೆ ಬೇಕಿರುವ ವೈದ್ಯಕೀಯ ಸಲಕರಣೆಗಳ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸಲು ಅನುಕೂಲವಾಗುವಂತೆ ಬೆಂಗಳೂರು ಅಥವಾ ಕಲಬುರಗಿ ಲ್ಯಾಬ್‍ಗಳಲ್ಲಿ ಪ್ರತ್ಯೇಕ ವಿಭಾಗ ಅಥವಾ ಪ್ರತ್ಯೇಕ ಸಮಯ ನಿಗದಿ ಮಾಡಿಕೊಡಲು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 117 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗಿದೆ. ಕೆಲಸಕ್ಕಿಂತ ಮುಂಚಿತವಾಗಿ ಕೂಲಿಕಾರರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ಮಾತನಾಡಿ, ಜಿಲ್ಲೆಯಲ್ಲಿ 16 ಚೆಕ್‍ಪೋಸ್ಟ್‍ಗಳಿದ್ದು, ಕಟ್ಟುನಿಟ್ಟಾಗಿ ಲಾಕ್‍ಡೌನ್ ಪಾಲನೆ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವ ಕುರಿತು ಹೆಚ್ಚಿನ ಒತ್ತು ನೀಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಪೊಲೀಸ್ ಸಿಬ್ಬಂದಿಗಳ ಕೊರತೆ ಇಲ್ಲ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕರಾದ ಆರ್.ದೇವಿಕಾ ಅವರು ಮಾತನಾಡಿ, ಜಿಲ್ಲೆಯ ಒಟ್ಟು 1.10 ಲಕ್ಷ ರೈತರು ಪಿ.ಎಂ. ಕಿಸಾನ್ ಯೋಜನೆ ಸೌಲಭ್ಯವನ್ನು ಪಡೆದಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆಪೂರ್ವ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ 2,90,897 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಗುರಿಗೆ ಪೂರಕವಾಗಿ 25,383 ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆ ಇರುತ್ತದೆ. ಈ ಪೈಕಿ 16,801.5 ಕ್ವಿಂಟಲ್ ಕೆ.ಎಸ್.ಎಸ್.ಸಿ., ಎನ್.ಎಸ್.ಸಿ ಹಾಗೂ ಖಾಸಗಿ ಪೂರೈಕೆದಾರರಿಗೆ ಬಿತ್ತನೆ ಬೀಜ ಪೂರೈಸಲು ಕಾರ್ಯಾದೇಶ ನೀಡಲಾಗಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆ ಮತ್ತು ಖಾಸಗಿ ವಿತರಕರಲ್ಲಿ 21,926 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಏಪ್ರಿಲ್ ಮಾಹೆಗೆ 13,525 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ. ಬೆಳೆಗಳ ರೋಗ ಮತ್ತು ಕೀಟಗಳ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ 16 ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಖಾಸಗಿ ಮಾರಾಟಗಾರರಲ್ಲಿ 52,027 ಲೀಟರ್/ಕೆ.ಜಿ ದಾಸ್ತಾನು ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳ ಕುರಿತಂತೆ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
 
*ಮಾದರಿ ಸಂಗ್ರಹ ವಾಹನಕ್ಕೆ ಚಾಲನೆ*: ಕೋವಿಡ್-19 ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವ ಸಂಚಾರಿ ಮಾದರಿ ಸಂಗ್ರಹ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು. ನಂತರ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಚವನ್ ಪ್ರಶ್ ವಿತರಣೆ ಮಾಡಲಾಯಿತು.

Comments