ಅದ್ಯಪಾಡಿ ಡ್ಯಾಮ್ ನಲ್ಲಿ ನೀರಿನಲ್ಲಿ ಮುಳುಗಿ ಯುವಕ ಸಾವು


ಮಂಗಳೂರು ; ಫ‌ಲ್ಗುಣಿ ನದಿಯ ಅದ್ಯಪಾಡಿ ಡ್ಯಾಮ್‌ ಬಳಿ ಮಂಗಳವಾರ ನೀರಿನಲ್ಲಿ ಮುಳುಗಿ ಗುರುಪುರ ಪಡ್ಡಾಯಿ ಪದವು ನಿವಾಸಿ ಮಾಲಿಕ್‌ (18) ಸಾವನ್ನಪ್ಪಿದ್ದಾರೆ.

ಡ್ಯಾಂ ನೀರಿನಲ್ಲಿ ಚಿಪ್ಪು ಮೀನು (ಮರುವಾಯಿ) ಹಿಡಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು ತಿಳಿಸಿದ್ದಾರೆ. ಮಾಲಿಕ್‌ ಮತ್ತು ಇತರ ಇಬ್ಬರು ಅದ್ಯಪಾಡಿ ಡ್ಯಾಮ್‌ಗೆ ಚಿಪ್ಪು ಮೀನು ಹಿಡಿಯಲು ಮಂಗಳವಾರ ಮಧ್ಯಾಹ್ನ ಬಳಿಕ ಹೋಗಿದ್ದರು. ಮೀನು ಹಿಡಿಯುತ್ತಿದ್ದಾಗ ಮಾಲಿಕ್‌ ಆಳವಾದ ಹೊಂಡಕ್ಕೆ ಬಿದ್ದಿದ್ದು, ಈಜು ತಿಳಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ದಳದವರು ಆಗಮಿಸಿ ಊರವರ ಸಹಕಾರದಿಂದ ಮೃತದೇಹವನ್ನು ಮೇಲೆತ್ತಿದರು.

ಗುರುಪುರ ಸಮೀಪದ ಪಡ್ಡಾಯಿ ಪದವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಯೂಸುಫ್‌ – ಜೊಹರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮಾಲಿಕ್‌ ಏಕೈಕ ಪುತ್ರನಾಗಿದ್ದ.  ಕಳೆದ 10 ದಿನಗಳಲ್ಲಿ ಫ‌ಲ್ಗುಣಿ ನದಿಯ ನೀರಿಗೆ ಚಿಪ್ಪು ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 2ನೇ ಪ್ರಕರಣ ಇದಾಗಿದೆ. ಮೇ 9ರಂದು ಮಳವೂರು ಡ್ಯಾಮ್‌ ಬಳಿ ಕಾವೂರಿನ ಫೋಟೊಗ್ರಾಫರ್‌ ಕೌಶಿಕ್‌ ಸಾವನ್ನಪ್ಪಿದ್ದರು.

Comments