ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ-ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ಯಾದಗಿರಿ: ಮತದಾರರ ಪಟ್ಟಿಗಳ ನಿರಂತರ ಕಾಲೋಚಿತಗೊಳಿಸಲು ಪ್ರಜಾಪ್ರಾತಿನಿಧ್ಯ ಕಾಯ್ದೆ 1950ರ ಕಲಂ (22) ಮತ್ತು 23ರಡಿ ನಾಮಪತ್ರಗಳ ಸ್ವೀಕೃತಿ ಕೊನೆಯ ದಿನಾಂಕದವರೆಗೆ ಮತದಾರರ ಸೇರ್ಪಡೆಗೆ ಅವಕಾಶಗಳಿದ್ದು, ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅರ್ಹ ಶಿಕ್ಷಕರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಅರ್ಹತಾ ದಿನಾಂಕ 01.11.2019ರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡುವ ಕುರಿತು ರಾಜಕೀಯ ಪಕ್ಷದವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ನಿಯೋಜಿತ ಅಧಿಕಾರಿಗಳಿಗೆ ಸಹ ಸಲ್ಲಿಸಬಹುದಾಗಿದೆ. ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಯಾವುದೇ ವ್ಯಕ್ತಿಯು ನಮೂನೆ 19ರಲ್ಲಿ ಅರ್ಜಿಯನ್ನು ಸಲ್ಲಿಸಿ, ಶಿಕ್ಷಕರ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು ಎಂದು ಅವರು ತಿಳಿಸಿದರು.

ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ಬೋಧನಾ ವೃತ್ತಿಯಲ್ಲಿ ನಿರತನಾಗಿರದಿದ್ದಲ್ಲಿ ಪ್ರಮಾಣ ಪತ್ರವನ್ನು ಅಂತಹ ವ್ಯಕ್ತಿಯು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿರತಕ್ಕದ್ದು. ಖುದ್ದಾಗಿ ಅಥವಾ ಅಂಚೆಯ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ನೋಂದಣಿ ಅಧಿಕಾರಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸತಕ್ಕದ್ದಲ್ಲ. ಆದರೆ, ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲಾ ಅರ್ಜಿಗಳನ್ನು ಒಟ್ಟಾರೆಯಾಗಿ ಸಲ್ಲಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ-19ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು. ಹಾಗೂ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನು ಒದಗಿಸಿ, ಪ್ರಮಾಣ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸತಕ್ಕದ್ದು ಎಂದು ಅವರು ಮಾಹಿತಿ ನೀಡಿದರು.

ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ಅವನು ತಿಳಿದಿರುವ ಅಥವಾ ನಂಬುವಂತಹ ಅಥವಾ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1950ರ 30ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುವುದು. ನಮೂನೆ-19ರ ಮುದ್ರಿತ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿ/ನಿಯೋಜಿತ ಅಧಿಕಾರಿಯವರ ಕಛೇರಿಗಳಿಂದ ಪಡೆಯಬಹುದು ಎಂದು ಅವರು ತಿಳಿಸಿದರು.

*ಅರ್ಹತೆಗಳು*: ಭಾರತದ ಪ್ರಜೆಯಾಗಿರುವ ಮತ್ತು ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರಬೇಕು. ರಾಜ್ಯ ಅಥವಾ ಕೇಂದ್ರ ಸರಕಾರದ ಸರಕಾರಿ/ ಅನುದಾನಿತ ಸಹಿತ ಅಥವಾ ರಹಿತ ಸಂಸ್ಥೆಯಲ್ಲಿ ಶಿಕ್ಷಕ/ಶಿಕ್ಷಕಿ/ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರಬೇಕು. 01.11.2019ಕ್ಕೆ 3 ವರ್ಷ ಸೇವಾ ಅನುಭವ ಹೊಂದಿರಬೇಕು. ಪ್ರೌಢ ಶಾಲೆ ಅಥವಾ ಅದಕ್ಕಿಂತ ಮೇಲು ಮಟ್ಟದ ಶಾಲಾ/ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರಬೇಕು. ಸೇವೆ ಸಲ್ಲಿಸುತ್ತಿರುವ ಬಗ್ಗೆ ಪ್ರಮಾಣ ಪತ್ರ ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಅವರು ಮಾಹಿತಿ ನೀಡಿದರು.

6ನೇ ನವೆಂಬರ್-2019ಕ್ಕೆ ಮೊದಲು ಆರು ವರ್ಷಗಳ ಅವಧಿಯಲ್ಲಿ ಕನಿಷ್ಠ ಒಟ್ಟು ಮೂರು ವರ್ಷಗಳಷ್ಟು, ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟ ಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಪ್ರಯುಕ್ತ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಜಿ ನಮೂನೆ-19ನ್ನು ಭರ್ತಿ ಮಾಡಿ ಸಂಬಂಧಪಟ್ಟ ತಹಸೀಲ್ದಾರರಿಗೆ ಸಲ್ಲಿಸಲು ತಿಳಿಸಿದರು.

*ಮತದಾನ ಕೇಂದ್ರಗಳ ವಿವರ*: ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ 7 ಮತದಾನ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ. ಯಾದಗಿರಿ ತಾಲ್ಲೂಕಿನಲ್ಲಿ -1, ಗುರುಮಿಟಕಲ್ ತಾಲ್ಲೂಕಿನಲ್ಲಿ - 1, ಶಹಾಪುರ ತಾಲ್ಲೂಕಿನಲ್ಲಿ -1, ಸುರಪುರ ತಾಲ್ಲೂಕಿನಲ್ಲಿ -2 ಮತ್ತು ಹುಣಸಗಿ ತಾಲ್ಲೂಕಿನಲ್ಲಿ -2 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ಕೋವಿಡ್-19 ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಮತಗಟ್ಟೆ ಸ್ಥಾಪಿಸುವ ಸಂಬಂಧ ಶಹಾಪೂರ ತಾಲ್ಲೂಕಿನಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಯುಕ್ತ ವಡಗೇರಾ ತಾಲ್ಲೂಕಿನ ಮತದಾರರನ್ನು ಪ್ರತ್ಯೇಕಿಸಿ, ವಡಗೇರಾ ತಾಲ್ಲೂಕು ಕೇಂದ್ರದಲ್ಲಿ ಹೆಚ್ಚುವರಿ ಮತಗಟ್ಟೆಯನ್ನು ಸ್ಥಾಪಿಸಲು ಚರ್ಚಿಸಲಾಯಿತು.

ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ.ಶರಣಭೂಪಾಲ ರೆಡ್ಡಿ, ಜೆಡಿಎಸ್ ಎಸ್.ಟಿ ಮೋರ್ಚಾ ಘಟಕದ ಅಧ್ಯಕ್ಷರಾದ ಶಾಂತಪ್ಪ ಜಾಧವ್, ಬಿಎಸ್‍ಪಿ ಜಿಲ್ಲಾಧ್ಯಕ್ಷರಾದ ತಜಮುಲ್, ಚುನಾವಣೆ ಶಾಖೆಯ ಶಿರಸ್ತೆದಾರ್ ಜಾಯ್ ವಿಲ್ಸನ್, ಭೀಮೇಶಿ, ಖಲೀಲ್ ಸಾಬ್ ಹಾಜರಿದ್ದರು.

Comments